ಮಿರ್ಜಾಪುರ: ಮಿರ್ಜಾಪುರ ರೈಲು ನಿಲ್ದಾಣದಲ್ಲಿ ರೈಲು ಟಿಕೆಟ್‌ಗಳ ವಿಚಾರದಲ್ಲಿ ಉಂಟಾದ ವಾಗ್ವಾದದ ನಂತರ ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಕನ್ವರ್ ಯಾತ್ರಿಕರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಜುಲೈ 19ರಂದು ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಯೋಧನಿಗೆ ಕೇಸರಿ ಬಣ್ಣದ ಖಾವಿ ಬಟ್ಟೆ ತೊಟ್ಟಿದ್ದ ಶಿವ ಭಕ್ತರು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಘಟನೆ ಸಂಬಂಧ ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆ.
ಮಿರ್ಜಾಪುರ ನಿಲ್ದಾಣದಲ್ಲಿ ಬ್ರಹ್ಮಪುತ್ರ ಮೇಲ್ ರೈಲು ಹತ್ತಲು ಜುಲೈ 19ರಂದು ಹೋಗುತ್ತಿದ್ದಾಗ , ಕೇಸರಿ ಬಟ್ಟೆ ಧರಿಸಿದ್ದ ಗುಂಪೊಂದು ಯೋಧನ ಮೇಲೆ ಹಲ್ಲೆ ನಡೆಸಿತ್ತು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಗುಂಪೊಂದು ಯೋಧನನ್ನು ಕೆಳಗೆ ದೂಡಿ, ಅವನಿಗೆ ಕೈ ಮತ್ತು ಕಾಲುಗಳಿಂದ ಮನ ಬಂದಂತೆ ಥಳಿಸುತ್ತಿರುವುದು ಕಂಡು ಬಂದಿತ್ತು.
ಸ್ಥಳದಲ್ಲಿ ನಿಯೋಜಿಸಲಾದ ಜಿಆರ್‌ಪಿ ಯೋಧರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ನಂತರ ಸಿಆರ್‌ಪಿಎಫ್ ಯೋಧನಿಗೆ ಸಹಾಯ ಮಾಡಲು ಹೆಚ್ಚಿನ ಪಡೆಗಳನ್ನು ಕಳುಹಿಸಲಾಯಿತು ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಇನ್ಸ್‌ಪೆಕ್ಟರ್ ರಾಘವೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಸಿಆರ್‌ಪಿಎಫ್ ಯೋಧ ತನ್ನ ಕರ್ತವ್ಯಕ್ಕಾಗಿ ಮಣಿಪುರಕ್ಕೆ ಹೋಗುತ್ತಿದ್ದರು ಎಂದು ಜಿಆರ್‌ಪಿ ತಿಳಿಸಿದೆ. ಯೋಧನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ರೈಲ್ವೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.