ಇಂಧೋರ್: ತಾಂತ್ರಿಕ ಸಮಸ್ಯೆಯ ಕಾರಣದಿಂದ 140 ಪ್ರಯಾಣಿಕರೊಂದಿಗೆ ಗೋವಾದಿಂದ ಬಂದ ಇಂಡಿಗೋ ವಿಮಾನವೊಂದು ಸೋಮವಾರ ಸಂಜೆ ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಗೋವಾದಿಂದ ಆಗಮಿಸಿದ ಇಂಡಿಗೋ ಏರ್‌ಲೈನ್ಸ್ ವಿಮಾನದ (6E 813) ಸಂಭವನೀಯ ಲ್ಯಾಂಡಿಂಗ್ ಗೇರ್ ( undercarriage) ಸಮಸ್ಯೆ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿಪಿಕಾಂತ್ ಸೇಠ್ ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ಲ್ಯಾಂಡಿಂಗ್ ಆಗುವ ಮುನ್ನಾ ಸುಮಾರು 25 ನಿಮಿಷಗಳ ಕಾಲ ಆಕಾಶದಲ್ಲಿಯೇ ಸುತ್ತು ಹೊಡೆಯಿತು. ಈ ಎಚ್ಚರಿಕೆಯ ಕಾರಣ ಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ವಿಮಾನದ ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಭವನೀಯ ಲ್ಯಾಂಡಿಂಗ್ ಗೇರ್ ಸಮಸ್ಯೆಯ ಮಾಹಿತಿ ತಿಳಿದ ತಕ್ಷಣ, ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು.ಮಾರ್ಗಸೂಚಿಗಳ ಪ್ರಕಾರ ಅಗ್ನಿ ಶಾಮಕ ಮತ್ತು ವೈದ್ಯಕೀಯ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. 140 ಪ್ರಯಾಣಿಕರಿದ್ದ ವಿಮಾನ ಸಂಜೆ 5-15ರಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಯಿತು ಎಂದು ಮತ್ತೋರ್ವ ಅಧಿಕಾರಿ ಮಾಹಿತಿ ನೀಡಿದರು.
ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನ ಇಂಧೋರ್ ನಲ್ಲಿ ಲ್ಯಾಂಡಿಂಗ್ ಆಗುವ ಮುನ್ನಾ ತಾಂತ್ರಿಕ ಸಮಸ್ಯೆ ವರದಿಯಾಗಿರುವುದಾಗಿ ಇಂಡಿಗೋ ವಿಮಾನದ ವಕ್ತಾರರು ತಿಳಿಸಿದ್ದಾರೆ.