ನಾಸಿಕ್: ವಿಧಾನಸಭೆಯಲ್ಲಿ ಫೋನ್‌ನಲ್ಲಿ ರಮ್ಮಿ ಆಡಿ ಸುದ್ದಿಗೆ ಗ್ರಾಸವಾಗಿದ್ದ ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್‌ರಾವ್ ಕೊಕಾಟೆ ಇಂದು ರೈತರ ಬಗ್ಗೆ ತಮ್ಮ ಹಿಂದಿನ ಹೇಳಿಕೆಗಳಿಗೆ ಸ್ಪಷ್ಟನೆ ನೀಡಲು ಪ್ರಯತ್ನಿಸುವಾಗ ತಮ್ಮದೇ ಸರ್ಕಾರವನ್ನು 'ಭಿಕ್ಷುಕ' ಎಂದು ಕರೆದು ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.
ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ರಾಜ್ಯ ಕೃಷಿ ಸಚಿವ ಕೊಕಾಟೆ ಈ ವರ್ಷದ ಆರಂಭದಲ್ಲಿ ರೈತರನ್ನು ಭಿಕ್ಷುಕರಿಗೆ ಹೋಲಿಸಿದ್ದರು. ಭಿಕ್ಷುಕ ಕೂಡ ಒಂದು ರೂಪಾಯಿ ಭಿಕ್ಷೆ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲಿ ನಾವು ಒಂದು ರೂಪಾಯಿಗೆ ಬೆಳೆ ವಿಮೆ ನೀಡುತ್ತಿದ್ದೇವೆ. ಆದರೂ, ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ರೈತರಿಗೆ ಒಂದು ರೂಪಾಯಿಯೂ ಕೊಡಲ್ಲ. ಆದರೆ ಅವರಿಂದ ಒಂದು ರೂಪಾಯಿ ತೆಗೆದುಕೊಳ್ಳುತ್ತದೆ. ಈ ಸರ್ಕಾರವೇ ಭಿಕ್ಷುಕ ಸರ್ಕಾರ ಎಂದು ಹೇಳಿದರು.
ನಾಸಿಕ್ ಜಿಲ್ಲೆಯ ಸಿನ್ನಾರ್ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವರು, ಒಂದು ರೂಪಾಯಿ ಬೆಳೆ ವಿಮಾ ಯೋಜನೆಗೆ ಐದು ಲಕ್ಷದಿಂದ 5.3 ಲಕ್ಷ ನಕಲಿ ಅರ್ಜಿಗಳು ಬಂದಿವೆ. ಅವುಗಳನ್ನು ತಿರಸ್ಕರಿಸಿದ್ದು ಹಲವಾರು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾದ ಒಂದು ರೂಪಾಯಿ ಬೆಳೆ ವಿಮಾ ಯೋಜನೆಯನ್ನು ಕೆಲವು ತಿಂಗಳ ಹಿಂದೆ ರದ್ದುಗೊಳಿಸಲಾಯಿತು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಬದಲಾಯಿಸಲಾಯಿತು.
ಕೊಕಟೆ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಫಡ್ನವೀಸ್, ಅವರು ಅಂತಹ ಹೇಳಿಕೆ ನೀಡಿದ್ದರೆ, ಸಚಿವರು ಈ ರೀತಿ ಮಾತನಾಡುವುದು ಸೂಕ್ತವಲ್ಲ. ಕೃಷಿ ಕ್ಷೇತ್ರದಲ್ಲಿ ಪ್ರತಿ ವರ್ಷ 5,000 ಕೋಟಿ ರೂ. ಹೂಡಿಕೆ ಮಾಡಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸವಾಲುಗಳ ಹೊರತಾಗಿಯೂ, ಮಹಾರಾಷ್ಟ್ರದ ಆರ್ಥಿಕತೆ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಗಡ್ಚಿರೋಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.