ನವದೆಹಲಿ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರಾಜಕೀಯ ಸಭೆಗಾಗಿ ರಾಷ್ಟ್ರ ರಾಜಧಾನಿಯ ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿರುವ ಮಸೀದಿಯನ್ನು ಬಳಸಿಕೊಂಡಿದ್ದಾರೆ ಎಂದು ಉತ್ತರಾಖಂಡ್ ವಕ್ಪ್ ಮಂಡಳಿ ಅಧ್ಯಕ್ಷ ಶಾದಾಬ್ ಶಾಮ್ಸ್ ಮಂಗಳವಾರ ಆರೋಪಿಸಿದ್ದಾರೆ.
ಇದು ಮುಸ್ಲಿಂ ಭಾವನೆಗಳಿಗೆ ಧಕ್ಕೆ ತಂದಿದ್ದು, ಅಖಿಲೇಶ್ ಯಾದವ್ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
SP ಸಂಸದ ಧರ್ಮೇಂದ್ರ ಯಾದವ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಪತ್ನಿ ಡಿಂಪಲ್ ಯಾದವ್, ರಾಂಪುರದ ಪಕ್ಷದ ಸಂಸದ ಮೌಲಾನಾ ಮೊಹಿಬುಲ್ಲಾ ನದ್ವಿ ಮತ್ತು ಸಂಭಾಲ್ ಸಂಸದ ಶಫೀಕರ್ ರಹಮಾನ್ ಬಾರ್ಕ್ ಸೇರಿದಂತೆ ಹಲವಾರು ಪಕ್ಷದ ಸಂಸದರೊಂದಿಗೆ ಅಖಿಲೇಶ್ ಯಾದವ್ ಮಸೀದಿಯೊಳಗೆ ಕುಳಿತಿರುವುದನ್ನು ಕಾಣಬಹುದು.
ಈ ಪೋಟೋಗೆ ಪ್ರತಿಕ್ರಿಯಿಸಿರುವ ಶಾದಾಬ್ ಶಾಮ್ಸ್, ಮಸೀದಿಗಳು ಧಾರ್ಮಿಕ ನಂಬಿಕೆಯ ಪವಿತ್ರ ಕೇಂದ್ರಗಳಾಗಿದ್ದು, ರಾಜಕೀಯ ಚರ್ಚೆ ಅಲ್ಲಿ ನಡೆಯಬಾರದು. ಪಕ್ಷದ ಸಂಸದರೊಂದಿಗಿನ ರಾಜಕೀಯ ಸಭೆಗೆ ಮಸೀದಿಯನ್ನು ಬಳಸಿಕೊಳ್ಳುವ ಮೂಲಕ ಅಖಿಲೇಶ್ ಯಾದವ್ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದಕ್ಕಾಗಿ ಅವರು ಮುಸ್ಲಿಮರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಂಪುರ ಸಂಸದ ಮೌಲಾನಾ ಮೊಹಿಬುಲ್ಲಾ ನದ್ವಿ ಅವರ ದೆಹಲಿ ನಿವಾಸದಲ್ಲಿ ತೆಗೆದ ಚಿತ್ರಗಳು ಎಂದು ಹೇಳುವ ಮೂಲಕ ಧರ್ಮೇಂದ್ರ ಯಾದವ್ ಸುಳ್ಳು ಹೇಳಿದ್ದಾರೆ ಎಂದು ಶಮ್ಸ್ ಆರೋಪಿಸಿದ್ದಾರೆ. ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ಮಸೀದಿಯ ಒಳಭಾಗವು ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಅದನ್ನು ಸುಲಭವಾಗಿ ಗುರುತಿಸಬಹುದು. ಧರ್ಮೇಂದ್ರ ಯಾದವ್ ಅದರ ಬಗ್ಗೆ ಸುಳ್ಳು ಹೇಳಬಾರದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷರು ಹೇಳಿದ್ದಾರೆ.