ನಾಸಿಕ್: 2022ರ ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಹಿಂದುತ್ವದ ಪ್ರತಿಪಾದಕ ವಿ.ಡಿ ಸಾರ್ವಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರದ ನಾಸಿಕ್ ನ ಸ್ಥಳೀಯ ನ್ಯಾಯಾಲಯವೂಂದು ಗುರುವಾರ ಜಾಮೀನು ನೀಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಆರ್ ಸಿ ನರ್ವಾಡಿಯಾ ಅವರ ಮುಂದೆ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ, ನಾನು ತಪ್ಪಿತಸ್ಥನಲ್ಲ ಎಂದು ಮನವಿ ಮಾಡಿದರು. ಬಳಿಕ ಅವರ ವಕೀಲರು ಜಾಮೀನು ಕೋರಿದರು.
ನ್ಯಾಯಾಲಯ ರೂ. 15,000 ಬಾಂಡ್ ನೊಂದಿಗೆ ಜಾಮೀನು ಮಂಜೂರು ಮಾಡಿತು ಎಂದು ವಕೀಲ ಮನೋಜ್ ಪಿಂಗಳೆ ತಿಳಿಸಿದರು.
ನಾಸಿಕ್ ನಿವಾಸಿ ದೇವೇಂದ್ರ ಭೂತಾಡ ಅವರು ತಮ್ಮ ವಕೀಲ ಮನೋಜ್ ಪಿಂಗಳೆ ಮೂಲಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಮತ್ತು 504 (ಶಾಂತಿ ಭಂಗ ತರುವ) ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದರು.
ಹಿಂಗೋಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮತ್ತು ನವೆಂಬರ್ 2022 ರಲ್ಲಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ, ಸಾವರ್ಕರ್ ಅವರ ಪ್ರತಿಷ್ಠೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಸಾರ್ವಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಅಲ್ಲದೇ ಕ್ಷಮದಾನ ಕೋರಿ ಪತ್ರವನ್ನು ಬರೆದಿದ್ದರು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು. ಸಾರ್ವಕರ್ ಕುರಿತ ಹೇಳಿಕೆಗಾಗಿ ಅವರ ಮೊಮ್ಮಗ ಪುಣೆಯಲ್ಲಿಯೂ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.