ಗುವಾಹತಿ: ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಮತ್ತೆ ಕಿಡಿಕಾರಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, 'ನೆರೆಹೊರೆಯಲ್ಲಿ ಒಂದೇ ಒಂದು ಬಾಂಗ್ಲಾದೇಶಿ ಕುಟುಂಬವೂ ನೆಲೆಸಲು ಬಿಡಬೇಡಿ' ಎಂದು ಹೇಳಿದ್ದಾರೆ.
ಅಕ್ರಮ ವಲಸೆ ಸಮಸ್ಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಹಿಮಂತ ಬಿಸ್ವ ಶರ್ಮಾ, 'ನಾನು ಜೀವನಪರ್ಯಂತ ಮುಖ್ಯಮಂತ್ರಿಯಾಗಿದ್ದರೂ ಸಹ, ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ತೆಗೆದುಹಾಕಲು ಅದು ಸಾಕಾಗುವುದಿಲ್ಲ ಎಂದು ಸಮಸ್ಯೆಯ ಗಂಭೀರತೆ ಹೇಳಿದರು.
'ನಾನು ನಾಳೆ ಮುಖ್ಯಮಂತ್ರಿಯಾಗದಿರಬಹುದು, ಆದರೆ ಎಲ್ಲಾ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಜನರು ಮತ್ತು ಪ್ರತಿಯೊಬ್ಬ ಜಾಗರೂಕ ನಾಗರಿಕರನ್ನು ನಾನು ಈ ಮೂಲಕ ಕೇಳಿಕೊಳ್ಳುವುದೇನೆಂದರೆ, ನಿಮ್ಮ ನೆರೆಹೊರೆಯಲ್ಲಿ ಒಂದೇ ಒಂದು ಬಾಂಗ್ಲಾದೇಶಿ ಮುಸ್ಲಿಂ ಕುಟುಂಬವೂ ನೆಲೆಸಲು ಬಿಡಬೇಡಿ ಎಂದು ನಾನು ಒತ್ತಾಯಿಸುತ್ತೇನೆ. ಇದು ಒಂದರಿಂದ ಒಂದು ಪ್ರಾರಂಭವಾಗುತ್ತದೆ ಮತ್ತು ಇಡೀ ಗ್ರಾಮವನ್ನು ಕಳೆದುಕೊಳ್ಳುವುದರೊಂದಿಗೆ ಕೊನೆಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಅಸ್ಸಾಂನ ಪ್ರತಿಯೊಂದು ಮೂಲೆಯಿಂದ ಬರುತ್ತಿರುವ ಅಕ್ರಮ ವಲಸೆ ಕುರಿತ ಆತಂಕಕಾರಿ ವರದಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. 'ದೇಶದಲ್ಲಿ ಒಳನುಸುಳುವಿಕೆ ಆಳವಾಗಿ ಬೇರೂರಿದೆ. ರಾಜ್ಯದ ಸಾಂಸ್ಕೃತಿಕ ಮತ್ತು ಜನಸಂಖ್ಯಾ ಗುರುತನ್ನು ಬೆದರಿಸುತ್ತಿದೆ. ಇಂದು ಅವರು ನಿಮ್ಮ ನೆರೆಯವರಾದರೆ, ನಾಳೆ, ನಿಮ್ಮ ಅಸ್ತಿತ್ವವು ಅಪಾಯಕ್ಕೆ ಸಿಲುಕಲಿದೆ ಎಂದು ಹೇಳಿದರು.