ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಇದ್ದು, ಕೇಂದ್ರ ಚುನಾವಣಾ ಆಯೋಗ(ECI) ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ(CEO) ಕಚೇರಿ "ಸಂಪೂರ್ಣ ಸ್ವಾತಂತ್ರ್ಯವಾಗಿ" ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ತೆಗೆದುಕೊಂಡಿದೆ ಮತ್ತು ಕಚೇರಿಯನ್ನು ಕೋಲ್ಕತ್ತಾದ ಕೇಂದ್ರ ಸರ್ಕಾರಿ ಆವರಣಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸುತ್ತಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕೂಡ ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾಗಲಿದೆ ಎಂದು ECI ಮೂಲಗಳು ತಿಳಿಸಿವೆ.
ಪ್ರಸ್ತುತ, ಪಶ್ಚಿಮ ಬಂಗಾಳದ CEO ಕಚೇರಿಯು ರಾಜ್ಯದ ಗೃಹ ಮತ್ತು ಹಿಲ್ಸ್ ವ್ಯವಹಾರ ಇಲಾಖೆಯ "ಆಡಳಿತಾತ್ಮಕ ಮತ್ತು ಹಣಕಾಸು ನಿಯಂತ್ರಣ"ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. CEO ಕಚೇರಿಗೆ ಸಂಪೂರ್ಣ ಹಣಕಾಸು ಮತ್ತು ಆಡಳಿತಾತ್ಮಕ ಸ್ವಾತಂತ್ರ್ಯವನ್ನು ನೀಡಬೇಕೆಂದು ECI ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಸಂಬಂಧ ಇತ್ತೀಚೆಗೆ ECI ಅಧೀನ ಕಾರ್ಯದರ್ಶಿ ಅಶುತೋಷ್ ಎಂ ಅವರು, ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರಿಗೆ ಪತ್ರ ಬರೆದಿದ್ದು, ರಾಜ್ಯದ ಗೃಹ ಮತ್ತು ಹಿಲ್ಸ್ ವ್ಯವಹಾರ ಇಲಾಖೆಯಿಂದ CEO ಕಚೇರಿಯನ್ನು ಬೇರ್ಪಡಿಸುವಂತೆ ಕೇಳಿಕೊಂಡಿದ್ದಾರೆ. ವಿಶೇಷವಾಗಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಬರುವ ದುರ್ಗಾ ಪೂಜೆಗೆ ಮುನ್ನ ಡಾಲ್ಹೌಸಿಯ ಸ್ಟ್ರಾಂಡ್ ರಸ್ತೆಯಲ್ಲಿರುವ ಬಾಲ್ಮರ್ ಲಾರಿ ಕಟ್ಟಡದಲ್ಲಿರುವ ಸಿಇಒ ಕಚೇರಿಯನ್ನು ಕೋಲ್ಕತ್ತಾದ ಕೇಂದ್ರ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸುವ ಯೋಜನೆ ನಡೆಯುತ್ತಿವೆ.