ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಟ್ರಕ್ ಒಂದು 18 ರಿಂದ 20 ವಾಹನಗಳಿಗೆ ಗುದ್ದಿದೆ. ಅಪಘಾತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು 19 ರಿಂದ 20 ಜನರು ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಟ್ರಕ್ ಡಿಕ್ಕಿ ಹೊಡೆದ ವಾಹನಗಳಲ್ಲಿ ಅನೇಕ ಬಿಎಂಡಬ್ಲ್ಯೂ ಮತ್ತು ಮರ್ಸಿಡಿಸ್ ಐಷಾರಾಮಿ ಕಾರುಗಳು ಸೇರಿವೆ.
ಖೋಪೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ್‌ಗಡ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಬ್ರೇಕ್ ವೈಫಲ್ಯದಿಂದಾಗಿ ಟ್ರಕ್ ನಿಯಂತ್ರಣ ತಪ್ಪಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಕ್ಕಿಯಿಂದಾಗಿ ಹಲವು ವಾಹನಗಳು ನಜ್ಜುಗುಜ್ಜಾಗಿವೆ. ಗಾಯಾಳುಗಳನ್ನು ನವಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಚಿಕಿತ್ಸೆಯ ಸಮಯದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಖೋಪೋಲಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಟ್ರಕ್ ಚಾಲನೆ ಮಾಡುವಾಗ ಅವರು ಮದ್ಯಪಾನ ಮಾಡಿರಲಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಅಪಘಾತದ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಈ ಅಪಘಾತದ ನಂತರ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ದತ್ತಾ ಫುಡ್ ಮಾಲ್ ಬಳಿ ಸುಮಾರು ಐದು ಕಿಲೋಮೀಟರ್‌ಗಳಷ್ಟು ಟ್ರಾಫಿಕ್ ಜಾಮ್ ಉಂಟಾಯಿತು.
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಭಾರತದ ಅತ್ಯಂತ ಜನನಿಬಿಡ ಎಕ್ಸ್‌ಪ್ರೆಸ್‌ವೇ ಆಗಿದೆ. ಪ್ರತಿದಿನ ಸುಮಾರು ಒಂದೂವರೆ ಯಿಂದ ಎರಡು ಲಕ್ಷ ವಾಹನಗಳು ಇದರ ಮೂಲಕ ಹಾದು ಹೋಗುತ್ತವೆ. ಈ ಅಪಘಾತದಲ್ಲಿ ಮೂರು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ ಎಂದು ವರದಿಗಳು ತಿಳಿಸಿವೆ.