ಜೈಪುರ: ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಒಂದು ಭಾಗ ಕುಸಿದು ಏಳು ಮಕ್ಕಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಜೈಸಲ್ಮೇರ್ ಜಿಲ್ಲೆಯಲ್ಲಿ ಸೋಮವಾರ ಸರ್ಕಾರಿ ಶಾಲಾ ಕಟ್ಟಡದ ಮುಖ್ಯ ದ್ವಾರದ ಕಂಬ ಕುಸಿದು ಆರು ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದು, ಶಿಕ್ಷಕ ಗಾಯಗೊಂಡಿರುವ ಘಟನೆ ನಡೆದಿದೆ.
ರಾಮಗಢ ಪ್ರದೇಶದ ಸರ್ಕಾರಿ ಶಾಲಾ ಕಟ್ಟಡದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಘಟನೆಯಲ್ಲಿ ಒಂದು ಮಗು ಸಾವನ್ನಪ್ಪಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ(ಜೈಸಲ್ಮೇರ್) ಅಭಿಷೇಕ್ ಶಿವಹಾರೆ ಅವರು ಪಿಟಿಐಗೆ ತಿಳಿಸಿದ್ದಾರೆ.
ಮುಖ್ಯ ದ್ವಾರದ ಕಂಬ ಕುಸಿದು ವಿದ್ಯಾರ್ಥಿ ಅರ್ಬಾಜ್ ಖಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಶಿಕ್ಷಕ ಅಶೋಕ್ ಕುಮಾರ್ ಸೋನಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಯ ಕುಟುಂಬ ಸದಸ್ಯರು ಮಗುವಿನ ಶವದೊಂದಿಗೆ ಶಾಲೆಯ ಹೊರಗೆ ಧರಣಿ ನಡೆಸಿದರು.
ಭಾರೀ ಗಾಳಿಯಿಂದಾಗಿ ಮುಖ್ಯ ದ್ವಾರದ ಕಂಬ ಕುಸಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.