ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ನೀವು ಪಾಕಿಸ್ತಾನಕ್ಕೆ "ಕ್ಲೀನ್ ಚಿಟ್" ನೀಡಿದ್ದೀರಿ. ಇದು ಆ ದೇಶದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯನ್ನು ಪ್ರಶ್ನಿಸಿದಂತಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಲೋಕಸಭೆಯಲ್ಲಿ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಸೋಮವಾರ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಹತ್ಯೆಯಾದ ಮೂವರು ಭಯೋತ್ಪಾದಕರು ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.
ಈ ಮೂವರು ಪಾಕಿಸ್ತಾನದವರು ಎಂಬುದಕ್ಕೆ ಸರ್ಕಾರದ ಬಳಿ ಪುರಾವೆಗಳಿವೆ. ಅದರಲ್ಲಿ ಇಬ್ಬರ ಮತದಾರರ ಸಂಖ್ಯೆಗಳು ಇವೆ. ಪಾಕಿಸ್ತಾನದಲ್ಲಿ ತಯಾರಿಸಿದ ಚಾಕೊಲೇಟ್‌ಗಳು ಅವರ ಬಳಿ ಪತ್ತೆಯಾಗಿವೆ ಎಂದು ಲೋಕಸಭೆಗೆ ತಿಳಿಸಿದರು.
"ನೀವು ಯಾರನ್ನು ಉಳಿಸಲು ಬಯಸುತ್ತೀರಿ? ಪಾಕಿಸ್ತಾನವನ್ನು ರಕ್ಷಿಸುವುದರಿಂದ ನಿಮಗೆ ಏನು ಲಾಭ?" ಘಟನೆಯ ಹಿಂದಿನ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದವರು ಅಂತ ನೀವು ಏಕೆ ಭಾವಿಸುತ್ತೀರಿ? ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಚಿದಂಬರಂ ಅವರು ಸಂದರ್ಶನವೊಂದರಲ್ಲಿ ಪ್ರಶ್ನಿಸಿರುವುದಕ್ಕೆ ಅಮಿತ್ ಶಾ ತಿರುಗೇಟು ನೀಡಿದರು.
"ಅವರು(ಎನ್‌ಐಎ) ಭಯೋತ್ಪಾದಕರನ್ನು ಗುರುತಿಸಿದ್ದಾರೆಯೇ ಅಥವಾ ಅವರು ಎಲ್ಲಿಂದ ಬಂದರು? ನಮಗೆ ತಿಳಿದಿರುವಂತೆ, ಅವರು ಸ್ವದೇಶಿ ಭಯೋತ್ಪಾದಕರಾಗಿರಬಹುದು. ಅವರು ಪಾಕಿಸ್ತಾನದಿಂದ ಬಂದವರು ಎಂದು ನೀವು ಏಕೆ ಭಾವಿಸುತ್ತೀರಿ? ಅದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದು ಚಿದಂಬರಂ ಹೇಳಿದ್ದರು.
ದೇಶದ ಮಾಜಿ ಕೇಂದ್ರ ಗೃಹ ಸಚಿವರು ಪ್ರಪಂಚದ ಮುಂದೆ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುತ್ತಿದ್ದಾರೆ. ಈ ಹೇಳಿಕೆಯೊಂದಿಗೆ, ಕಾಂಗ್ರೆಸ್ ನಾಯಕರು "ಪಾಕಿಸ್ತಾನದ ಮೇಲಿನ ದಾಳಿ"ಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
ಇಡೀ ಜಗತ್ತು ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಒಪ್ಪಿಕೊಂಡಿದೆ. ಆದರೆ ಚಿದಂಬರಂ ಅವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. "ಅವರು ನನ್ನನ್ನು ಕೇಳಿದ್ದರೆ ನಾನು ಅವರಿಗೆ ಪುರಾವೆ ನೀಡುತ್ತಿದ್ದೆ ಎಂದು ಅಮಿತ್ ಶಾ ಹೇಳಿದರು.
ನಿನ್ನೆ ಹತ್ಯೆಯಾದ ಮೂವರು ಉಗ್ರರರಿಂದ ಎಂ.9 ಎಕೆ-47 ವಶಪಡಿಸಿಕೊಳ್ಳಲಾಗಿದ್ದು, ಇವುಗಳಲ್ಲಿ ಬಳಕೆ ಮಾಡಲಾದ ಗುಂಡುಗಳು ಪಹಲ್ಗಾಮ್ ದಾಳಿಯಲ್ಲಿ ಬಳಸಲಾದ ಗುಂಡುಗಳೇ ಆಗಿವೆ ಎಂದು ವಿಧಿವಿಜ್ಞಾನ ತಜ್ಞರು ಖಚಿತಪಡಿಸಿದ್ದಾರೆ ಎಂದು ಅಮಿತಿ ಶಾ ತಿಳಿಸಿದರು.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅಪರೇಷನ್ ಸಿಂಧೂರ್ ಬಗ್ಗೆ ಅನೇಕ ಟೀಕೆಗಳನ್ನು ಮಾಡುತ್ತಿವೆ. ಅಪರೇಷನ್ ಸಿಂಧೂರ್ನಲ್ಲಿ ಭಾರತದ ಫೈಟರ್ ಜೆಟ್ಗಳಿಗೆ ಹಾನಿಯಾಗಿದೆಯೇ? ಕದನ ವಿರಾಮ ಘೋಷಣೆಗೆ ಕಾರಣವೇನು? ಪಾಕ್ ಆಕ್ರಮಿತ ಕಾಶ್ಮೀರವನ್ನು ಏಕೆ ವಶಪಡಿಸಿಕೊಳ್ಳಲಿಲ್ಲ? ಪಾಕಿಸ್ತಾನದ ಉಗ್ರಗಾಮಿಗಳು ದೇಶದೊಳಕ್ಕೆ ನುಸುಳಿ ಬಂದಿದ್ದು ಹೇಗೆ? ಭದ್ರತಾ ಪಡೆಗಳು ಗಡಿಯಲ್ಲಿ ಆಲರ್ಟ್ ಆಗಿದ್ದರೆ ಉಗ್ರರು ಗಡಿ ನುಸುಳಲು ಅವಕಾಶ ಸಿಕ್ಕಿದ್ದು ಹೇಗೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿವೆ.
ಇಂಟಲಿಜೆನ್ಸ್ ವೈಫಲ್ಯ, ಅಪರೇಷನಲ್ ಲ್ಯಾಪ್ಸ್ ಮತ್ತು ವಿದೇಶಾಂಗ ನೀತಿಯನ್ನು ಪ್ರಶ್ನಿಸಿ ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಾಗ್ದಾಳಿ ನಡೆಸುತ್ತಿವೆ.