ನವದೆಹಲಿ: ಆಪರೇಷನ್ ಸಿಂಧೂರ್ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗಿದ್ದು, ಇದಕ್ಕೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಇತ್ತೀಚೆಗೆ ನೀಡಿರುವ ಪ್ರತಿಕ್ರಿಯೆಯೊಂದು ಈ ಊಹಾಪೋಹಕ್ಕೆ ಇಂಬು ನೀಡಿದೆ.
ಆಪರೇಷನ್ ಸಿಂಧೂರ ವಿಚಾರವಾಗಿ ಸೋಮವಾರ ಆರಂಭವಾದ ಚರ್ಚೆಗೆ ತಮ್ಮನ್ನು ಮತ್ತು ತರೂರ್ ಅವರನ್ನು ಕಡೆಗಣಿಸಲಾಗಿದೆ ಎಂಬ ಸುದ್ದಿ ಮಾಧ್ಯಮ ವರದಿಯಾಗಿತ್ತು.
ಈ ವರದಿಯ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮನೀಶ್ ತಿವಾರಿ ಅವರು, ಪುರಬ್ ಔರ್ ಪಚ್ಚಿಮ್ (1970) ಚಿತ್ರದ ಪ್ರಸಿದ್ಧ ದೇಶಭಕ್ತಿ ಗೀತೆಯ ಸಾಹಿತ್ಯವನ್ನು ಹಂಚಿಕೊಂಡು, ಹಾಡಿನ ಮೂಲಕ ತಿರುಗೇಟು ನೀಡಿದ್ದಾರೆ.
ಹೈ ಪ್ರೀತ್ ಜಹಾನ್ ಕಿ ರೀತ್ ಸದಾ, ಮೈನ್ ಗೀತ್ ವಹಾನ್ ಕೆ ಗಾತಾ ಹೂಂ, ಭಾರತ್ ಕಾ ರೆಹನೆ ವಾಲಾ ಹೂಂ, ಭಾರತ್ ಕಿ ಬಾತ್ ಸುನಾತಾ ಹೂಂ. ಜೈ ಹಿಂದ್ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಈ ಹಾಡಿನ ಅರ್ಥವೇನೆಂದರೆ, ನಾನು ಆ ಸ್ಥಳದ ಪದ್ಧತಿಗಳನ್ನು ಪ್ರೀತಿಸುತ್ತೇನೆ, ನಾನು ಆ ಸ್ಥಳದ ಹಾಡುಗಳನ್ನು ಹಾಡುತ್ತೇನೆ, ನಾನು ಭಾರತದ ನಿವಾಸಿ, ನಾನು ಭಾರತದ ಕಥೆಗಳನ್ನು ಹೇಳುತ್ತೇನೆ ಎಂಬುದು. ಈ ಸಾಹಿತ್ಯದ ಮೂಲಕ ಮನೀಷ್ ತಿವಾರಿಯವರು ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ತಿವಾರಿ ಅವರು ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ಭಾಗವಹಿಸಲು ಬಯಸಿದ್ದರು ಮತ್ತು ಮಾತನಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕಚೇರಿಗೆ ಮೇಲ್ ಕೂಡ ಮಾಡಿದ್ದರು. ಆದರೆ, ಕಾಂಗ್ರೆಸ್ ಅವರನ್ನು ಪಟ್ಟಿಯಲ್ಲಿ ಸೇರಿಸದಿರಲು ನಿರ್ಧರಿಸಿದ್ದು, ಇದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಕುತೂಹಲಕಾರಿ ಎಂಬಂತೆ ಚರ್ಚೆಯ ಸಮಯದಲ್ಲಿ ಮಾತನಾಡುವಂತೆ ಸ್ವತಃ ಕಾಂಗ್ರೆಸ್ ಪಕ್ಷವೇ ತರೂರ್ ಅವರನ್ನು ಸಂಪರ್ಕಿಸಿತ್ತು ಎನ್ನಲಾಗುತ್ತಿದ್ದು, ತರೂರ್ ಅವರು ಆಹ್ವಾನವನ್ನು ನಿರಾಕರಿಸಿದ್ದರು ಎಂದು ವರದಿಗಳು ತಿಳಿಸಿವೆ.
ಈ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ತರೂರ್ ಅವರು, ತಾವು ಮೌನ ವ್ರತ (ಮೌನ ಪ್ರತಿಜ್ಞೆ) ಮಾಡುತ್ತಿರುವುದಾಗಿ ವ್ಯಂಗ್ಯವಾಗಿ ಹೇಳಿದರು.