ಜಮ್ಮು: ದುಬಾರಿ ಥಾರ್ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿ ವೃದ್ಧ ಸ್ಕೂಟರ್ ಚಾಲಕನಿಗೆ ಢಿಕ್ಕಿ ಹೊಡೆದಿದ್ದು, ಈ ವೇಳೆ ಇದನ್ನು ಪ್ರಶ್ನಿಸುತ್ತಲೇ ಮತ್ತೆ ರಿವರ್ಸ್ ಬಂದು ಗುದ್ದಿರುವ ವಿಡಿಯೋ ವೈರಲ್ ಆಗುತ್ತಿದೆ.
ಜಮ್ಮುವಿನ ಗಾಂಧಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹೀಂದ್ರ ಥಾರ್ ಗಾಡಿಯೊಂದು ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಈ ವೇಳೆ ವೃದ್ದ ವ್ಯಕ್ತಿ ಕೂಗಿದ್ದು ಅವರು ಮೇಲೆ ಏಳುತ್ತಲೇ ಮತ್ತೆ ರಿವರ್ಸ್ ಬಂದ ಕಾರು ಚಾಲಕ ಮತ್ತೆ ಅವರಿಗೆ ಢಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಕೊಲೆಯತ್ನ
ಇನ್ನು ಮೆಲ್ನೋಟಕ್ಕೆ ಇದು ಕೊಲೆಯತ್ನ ಪ್ರಕರಣದಂತೆ ಕಾಣುತ್ತಿದೆ. ಕೆಳೆಗೆ ಬಿದ್ದ ಸ್ಕೂಟರ್ ಸವಾರ ಸಹಾಯ ಮಾಡುವಂತೆ ಕೈ ನೀಡಿದರು ಆತ ಅವರನ್ನು ಮೇಲೆತ್ತದೇ ಸೀದಾ ಬಂದು ತನ್ನ ಗಾಡಿಯ ಚಾಲಕನ ಸೀಟಿನಲ್ಲಿ ಕುಳಿತು ಹೊರಟು ಹೋಗಿದ್ದಾನೆ. ಈ ಥಾರ್ ಗಾಡಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಕೂಟರ್ ಸವಾರನ ಕುಟುಂಬ ಆಗ್ರಹಿಸಿದೆ.
ಘಟನೆಯಲ್ಲಿ ಸ್ಕೂಟರ್ ಸವಾರ ವೃದ್ಧನಿಗೆ ಗಂಭೀರ ಗಾಯವಾಗಿದೆ. ಥಾರ್ ಚಾಲಕನ ವಿರುದ್ಧ ಕೊಲೆ ಆರೋಪ ಹೊರಿಸಬೇಕು. ನಮ್ಮ ತಂದೆ ಐಸಿಯುನಲ್ಲಿದ್ದಾರೆ. ಅವರ ತಲೆಬುರುಡೆಯಲ್ಲಿ ಮೂಳೆ ಮುರಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅವರ ಸ್ಥಿತಿ ಗಂಭೀರವಾಗಿದೆ. ಜಮ್ಮುವಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳು ಕೇಳಿ ಬರುತ್ತಿರಲಿಲ್ಲ. ದೆಹಲಿ ಮತ್ತು ಇತರ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆ ವೃದ್ಧ ವ್ಯಕ್ತಿಯ ಪುತ್ರ ಹೇಳಿದ್ದಾರೆ.
ಥಾರ್ ಕಾರು ವಶಕ್ಕೆ
ಇನ್ನು ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಲೇ ಘಟನೆಯಲ್ಲಿ ಭಾಗಿಯಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿಯ ತಂದೆ ಮತ್ತು ಕಾರು ಮಾಲೀಕನನ್ನು ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಕೊಲೆಯತ್ನ ಆರೋಪ ಹೊರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109ರಡಿ ಜಮ್ಮು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೀಗೆ ಥಾರ್ ಗಾಡಿಯನ್ನು ರಿವರ್ಸ್ ತಂದು ಕೊಲೆಗೆ ಯತ್ನಿಸಿದ ಯುವಕ 20ರ ಹರೆಯದ ಯುವಕನಾಗಿದ್ದು, ಘಟನೆಯ ಬಳಿಕ ಆತ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.