ನವದೆಹಲಿ: ಇದೇ ನವೆಂಬರ್ ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಚುನಾವಣಾ ಆಯೋಗ, ಕರಡು ಮತದಾರರ ಪಟ್ಟಿಗೆ ಅರ್ಹ ನಾಗರಿಕರ ಹೆಸರು ಸೇರಿಸಲು ಅಥವಾ ತೆಗೆದುಹಾಕಲು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಮತದಾರರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಭಾಗವಾಗಿ, ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 1 ರಂದು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾ ಅಧಿಕಾರಿಗಳು(DEOಗಳು) ಬಿಹಾರದ ಎಲ್ಲಾ 38 ಜಿಲ್ಲೆಗಳಲ್ಲಿರುವ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಭೌತಿಕ ಮತ್ತು ಡಿಜಿಟಲ್ ಪ್ರತಿಗಳನ್ನು ಸಹ ನೀಡುತ್ತಾರೆ ಎಂದು ಕುಮಾರ್ ಹೇಳಿದ್ದಾರೆ.
"ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ(CEO) ಮತ್ತು 243 ಚುನಾವಣಾ ನೋಂದಣಿ ಅಧಿಕಾರಿಗಳು(EROಗಳು) ಆ ವಿಧಾನಸಭಾ ಕ್ಷೇತ್ರದ ಯಾವುದೇ ಮತದಾರರು ಅಥವಾ ಯಾವುದೇ ಮಾನ್ಯತೆ ಪಡೆದ ರಾಜಕೀಯ ಪಕ್ಷವು ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಕಾಣೆಯಾದ ಯಾವುದೇ ಅರ್ಹ ಮತದಾರರ ಹೆಸರುಗಳನ್ನು ಸೇರಿಸಲು ಅಥವಾ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಲು ಅಥವಾ ಕರಡು ಪಟ್ಟಿಯಲ್ಲಿರುವ ಯಾವುದೇ ತಪ್ಪನ್ನು ಸರಿಪಡಿಸಲು ಮುಂದೆ ಬಂದು ಆಕ್ಷೇಪಣೆಗಳನ್ನು ಸಲ್ಲಿಸಬಹುದು" ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಬಿಹಾರ SIR ವಿರುದ್ಧ ವಿರೋಧ ಪಕ್ಷಗಳ ನಿರಂತರ ಪ್ರತಿಭಟನೆ ನಡೆಸುತ್ತಿರುವುದರ ಮಧ್ಯೆ CECಯ ಈ ಪ್ರಕಟಣೆ ಹೊರಬಿದ್ದಿದೆ.