ಮುಂಬೈ: 80ಕ್ಕೂ ಹೆಚ್ಚು ದರೋಡೆಕೋರರನ್ನು ಗುಂಡಿಕ್ಕಿ ಕೊಂದ, 'ಎನ್‌ಕೌಂಟರ್ ಸ್ಪೆಷಲಿಸ್ಟ್' ಎಂದೇ ಖ್ಯಾತಿ ಪಡೆದಿದ್ದ ಸಹಾಯಕ ಪೊಲೀಸ್ ಆಯುಕ್ತ ದಯಾ ನಾಯಕ್ ಅವರು 30 ವರ್ಷಗಳ ಸುದೀರ್ಘ ಸೇವೆಯ ನಂತರ ಗುರುವಾರ ಸೇವೆಯಿಂದ ನಿವೃತ್ತರಾದರು.
1995 ರ ಬ್ಯಾಚ್ ಸಬ್ ಇನ್ಸ್‌ಪೆಕ್ಟರ್ ಆಗಿರುವ ದಯಾ ನಾಯಕ್ ಅವರು ಪಾತಕಿಗಳಿಗೆ ಎನ್‌ಕೌಂಟರ್ ಮೂಲಕ ಪಾಠ ಕಲಿಸುತ್ತಿದ್ದರು.
ಮುಂಬೈ ಅಪರಾಧ ವಿಭಾಗದ ಬಾಂದ್ರಾ ಘಟಕದ ಹಿರಿಯ ಇನ್ಸ್‌ಪೆಕ್ಟರ್ ಆಗಿದ್ದ ದಯಾ ನಾಯಕ್ ಅವರು ಕೇವಲ ಎರಡು ದಿನಗಳ ಹಿಂದಷ್ಟೇ ಎಸಿಪಿ ಹುದ್ದೆಗೆ ಬಡ್ತಿ ಪಡೆದಿದ್ದರು. ಎಸಿಪಿಯಾಗಿ ಬಡ್ತಿ ಪಡೆದ ಎರಡೇ ದಿನಕ್ಕೆ ನಿವೃತ್ತರಾಗಿದ್ದಾರೆ.
ದಯಾ ನಾಯಕ್ ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯವರು. ಮುಂಬೈಗೆ ಸ್ಥಳಾಂತರವಾಗಿದ್ದ ಅವರು 1995ರಲ್ಲಿ ಮಹಾರಾಷ್ಟ್ರದ ಜುಹು ಪೊಲೀಸ್ ಠಾಣೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅಲ್ಲಿಂದ ಸುದೀರ್ಘ ಮೂರು ದಶಕಗಳ ಕಾಲ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಅವರು ಇಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ದಯಾ ನಾಯಕ್ ಅವರು 2021ರಲ್ಲಿ ಅಂಬಾನಿ ನಿವಾಸಕ್ಕೆ ಬಂದಿರುವ ಭದ್ರತಾ ಬೆದರಿಕೆ ಮತ್ತು ಥಾಣೆ ಉದ್ಯಮಿ ಮನ್ಸುಖ್ ಹಿರೇನ್ ಅವರ ಕೊಲೆ ಪ್ರಕರಣವನ್ನು ಕೂಡ ಭೇದಿಸಿದ್ದ ತಂಡದಲ್ಲಿದ್ದರು.
2021 ರಲ್ಲಿ, ದಯಾ ನಾಯಕ್ ಅವರನ್ನು ಗೊಂಡಿಯಾ ಜಿಲ್ಲೆಗೆ ವರ್ಗಾಯಿಸಲಾಯಿತು ಆದರೆ ಮಹಾರಾಷ್ಟ್ರ ಆಡಳಿತ ನ್ಯಾಯಮಂಡಳಿ ಆದೇಶವನ್ನು ತಡೆಹಿಡಿದ ನಂತರ ಎಟಿಎಸ್‌ನಲ್ಲಿ ಮುಂದುವರೆದರು.