ನವದೆಹಲಿ: 'ಆಪರೇಷನ್ ಸಿಂಧೂರ್' ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮುಂದುವರೆದಿರುವಂತೆಯೇ ಇತ್ತ ರಷ್ಯಾ ತನ್ನ ಅತ್ಯಾಧುನಿಕ Stealth Beast ಫೈಟರ್ ಜೆಟ್ Su-57E ಯುದ್ಧ ವಿಮಾನವನ್ನು ಭಾರತಕ್ಕೆ ಮಾರಾಟ ಮಾಡುವ ಆಫರ್ ನೀಡಿದೆ.
ಹೌದು.. ಇತ್ತೀಚೆಗೆ ಪಾಕಿಸ್ತಾನಕ್ಕೆ ಚೀನಾ ತನ್ನ 5ನೇ ತಲೆಮಾರಿನ ಜೆ-35 ಯುದ್ಧ ವಿಮಾನ ನೀಡುವುದಾಗಿ ಘೋಷಣೆ ಮಾಡಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾರತಕ್ಕೆ ತನ್ನ ಎಫ್-35 ಫೈಟರ್ ನೀಡುವುದಾಗಿ ಆಫರ್ ನೀಡಿದ್ದರು. ಇದೀಗ ಈ ರೇಸ್ ಗೆ ರಷ್ಯಾ ಕೂಡ ಮುಂದಾಗಿದ್ದು, ರಷ್ಯಾ ತನ್ನ 5ನೇ ತಲೆಮಾರಿನ Su-57E Stealth Beast ಫೈಟರ್ ಜೆಟ್ ನೀಡುವ ಆಫರ್ ನೀಡಿದೆ.
ಅಮೆರಿಕದ F-35 ಯುದ್ಧ ವಿಮಾನಕ್ಕೆ ಸೆಡ್ಡು ಹೊಡೆಯುವ ಸುಖೋಯ್ SU-57 ಫೈಟರ್ ಜೆಟ್ ಅನ್ನು ಭಾರತಕ್ಕೆ ನೀಡಲು ರಷ್ಯಾ ಮುಂದಾಗಿದ್ದು, ಒಪ್ಪಂದದಲ್ಲಿ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಅನ್ನು ಜಾರಿಗೊಳಿಸುವ ಪ್ರಸ್ತಾಪ ಇಟ್ಟಿದೆ. ಈ ಡೀಲ್ ಅನ್ನು ಭಾರತ ಒಪ್ಪಿಕೊಂಡರೆ, ಇಂಡಿಯಾದ ಏರ್ ಡಿಫೆನ್ಸ್ ಸಾಮರ್ಥ್ಯ ಭಾರೀ ಪ್ರಮಾಣದಲ್ಲಿ ಹೆಚ್ಚುವುದಲ್ಲದೇ ದೇಶೀಯ ರಕ್ಷಣಾ ಉತ್ಪಾದನೆ ಉದ್ಯಮಕ್ಕೂ ಉತ್ತೇಜನ ದೊರೆಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾದಿಂದ ಮೇಕ್ ಇನ್ ಇಂಡಿಯಾ ಆಫರ್
ಇನ್ನು ಈ ಸುಖೋಯ್ 57 ಇ ಯುದ್ಧ ವಿಮಾನವನ್ನು ಭಾರತಕ್ಕೆ ನೀಡುವುದಾಗಿ ಘೋಷಣೆ ಮಾಡಿರುವ ರಷ್ಯಾ ಈ ಅತ್ಯಾಧುನಿಕ ಯುದ್ಧ ವಿಮಾನವನ್ನು ಭಾರತದಲ್ಲೇ ತಯಾರಿಸಲೂ ತಾನು ಸಿದ್ಧ ಎಂದು ಹೇಳಿದೆ ಎನ್ನಲಾಗಿದೆ. ಈ ಸುಖೋಯ್ 57 ಇ 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಆಗಿದ್ದು, ಭಾರತದಲ್ಲಿಯೇ ನಿರ್ಮಿಸುವ ಪ್ರಸ್ತಾಪವನ್ನು ರಷ್ಯಾ ಸರ್ಕಾರ ಮೋದಿ ಸರ್ಕಾರದ ಮುಂದಿಟ್ಟಿದೆ.
ರಷ್ಯಾದ ಆಫರ್ ಏನು? ಭಾರತಕ್ಕೆ ಏನು ಪ್ರಯೋಜನ?
SU-57 ಫೈಟರ್ ಜೆಟ್‌ಗಳನ್ನು ಭಾರತದಲ್ಲಿ ತಯಾರಿಸುವ ರಷ್ಯಾದ ಪ್ರಸ್ತಾಪವು ಭಾರತದ ವಾಯು ಶಕ್ತಿ ಮತ್ತು ಸ್ಥಳೀಯ ರಕ್ಷಣಾ ವಲಯವನ್ನು ಬಲಪಡಿಸಲು ಒಂದು ಅನನ್ಯ ಅವಕಾಶವಾಗಿದೆ. ಆದರೆ, ಈ ಯುದ್ಧ ವಿಮಾನದ ವೆಚ್ಚ, ತಂತ್ರಜ್ಞಾನ ವರ್ಗಾವಣೆ ಹಾಗೂ ಕಾರ್ಯಾಚರಣೆಯ ಸಿದ್ಧತೆಗೆ ಸಂಬಂಧಿಸಿದ ಸವಾಲುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ. ರಷ್ಯಾದ ಆಫರ್ ಅನ್ನು ಭಾರತ ಒಪ್ಪಿಕೊಂಡರೆ ಇದು ಜಗತ್ತಿನ ಅತ್ಯಂತ ದೊಡ್ಡ ರಕ್ಷಣಾ ಡೀಲ್ ಆಗುವ ಸಾಧ್ಯತೆ ಇದ್ದು, ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಉತ್ಪಾದಿಸುವ ರಾಷ್ಟ್ರಗಳ ಗುಂಪಿಗೆ ಭಾರತ ಸೇರಲಿದೆ.
ಇನ್ನು, ರಷ್ಯಾ ಭಾರತಕ್ಕೆ ನೀಡಿದ ಆಫರ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ನೋಡುವುದಾದರೆ, ಭಾರತದ 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ರಷ್ಯಾ SU-57 ಅನ್ನು ಭಾರತದಲ್ಲೇ ಉತ್ಪಾದಿಸಲಿದೆ ಎಂಬ ಆಫರ್ ಇಟ್ಟಿದೆ.
ಸ್ಥಳೀಯವಾಗಿಯೇ SU-57 ನಿರ್ಮಾಣ, ಫೈಟರ್ ಜೆಟ್ ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿಯೊಂದಿಗೆ ತಂತ್ರಜ್ಞಾನ ವರ್ಗಾವಣೆ ಪ್ರಸ್ತಾಪ ಕೂಡ ಮುಂದಿಟ್ಟಿದೆ. ಅಲ್ಲದೆ ಭಾರತಕ್ಕೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದ್ದು, ಭಾರತ-ಕೇಂದ್ರಿಕೃತ ಫೈಟರ್ ಜೆಟ್‌ಗಳ ತಯಾರಿಕೆಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ರಷ್ಯಾದಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಸ್ಥಳೀಯ ಉತ್ಪಾದನೆಯಿಂದ ವೆಚ್ಚ ಕಡಿಮೆಯಾಗಲಿದ್ದು, ಇದರ ಲಾಭ ಭಾರತಕ್ಕೆ ಸಿಗಲಿದೆ ಎಂಬುದನ್ನು ತನ್ನ ಆಫರ್‌ನಲ್ಲಿ ರಷ್ಯಾ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಎಫ್-35ಗೂ ಠಕ್ಕರ್ ನೀಡಲಿದೆ SU-57 ಯುದ್ಧ ವಿಮಾನ?
ಇನ್ನು ರಷ್ಯಾ ಭಾರತಕ್ಕೆ ನೀಡುವುದಾಗಿ ಘೋಷಣೆ ಮಾಡಿರುವ SU-57 ಯುದ್ಧ ವಿಮಾನ ರಷ್ಯಾದ ಮೊದಲ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ಆಗಿದೆ. ಇದನ್ನು ಅಮೆರಿಕದ F-22 ರಾಪ್ಟರ್ ಮತ್ತು F-35 ಯುದ್ಧ ವಿಮಾನಗಳಿಗೆ ಪೈಪೋಟಿ ನೀಡಲು ಅಭಿವೃದ್ಧಿ ಪಡಿಸಲಾಗಿದೆ. ಈ ಯುದ್ಧ ವಿಮಾನ ಸ್ಟೆಲ್ತ್ ಸಾಮರ್ಥ್ಯಗಳು, ಸುಧಾರಿತ ವಾಯು ತಂತ್ರಜ್ಞಾನ, ಸೂಪರ್‌ಕ್ರೂಸ್ ಸಾಮರ್ಥ್ಯ ಮತ್ತು ಅಪ್‌ಡೇಟೆಡ್ ಸ್ಕಿಲ್‌ಗಳನ್ನು ಹೊಂದಿದ್ದು, ವಿಶ್ವದ ಅತ್ಯಂತ ಬಲಿಷ್ಠ ಹಾಗೂ ಅಪ್‌ಡೇಟೆಡ್ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.
ಭಾರತಕ್ಕೆ ಈ ಯುದ್ಧ ವಿಮಾನ ಏಕೆ ಬೇಕು?
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತವು ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಉನ್ನತೀಕರಣಕ್ಕೆ ವೇಗ ನೀಡಿದೆ. ಅದರಲ್ಲೂ ವಾಯುಪಡೆಯನ್ನು ಆಧುನೀಕರಿಸುತ್ತಿರುವ ಭಾರತಕ್ಕೆ ಫೈಟರ್ ಜೆಟ್‌ಗಳ ಕೊರತೆ ಕಾಡುತ್ತಿದೆ. ಭಾರತದ ಬಳಿ ಸದ್ಯ ರಫೇಲ್ ಫೈಟರ್ ಜೆಟ್ ಇದ್ದು, ಅದು 4.5 ತಲೆಮಾರಿನ ಯುದ್ಧ ವಿಮಾನವಾಗಿದೆ. ಈ ಹಿನ್ನೆಲೆ 5ನೇ ತಲೆಮಾರಿನ ಯುದ್ಧ ವಿಮಾನ ಭಾರತಕ್ಕೆ ಅವಶ್ಯಕ ಎನ್ನಲಾಗಿದೆ. ಪ್ರಮುಖವಾಗಿ ಭಾರತದ ವಾಯುಪಡೆಯ ಸ್ಕ್ವಾಡ್ರನ್ ಸಾಮರ್ಥ್ಯ ಕ್ಷೀಣಿಸುತ್ತಿದ್ದು, ಭಾರತೀಯ ವಾಯುಪಡೆ 42 ಸ್ಕ್ವಾಡ್ರನ್‌ಗಳನ್ನು ನಿರ್ವಹಿಸಲು ಅಧಿಕಾರ ಹೊಂದಿದ್ದು, ಪ್ರಸ್ತುತ 31 ಸ್ಕ್ವಾಡ್ರನ್‌ಗಳನ್ನು ಮಾತ್ರ ಹೊಂದಿದೆ.
ಅಂತೆಯೇ ಭಾರತ ಅತ್ತ ಪಾಕ್ ಮತ್ತು ಇತ್ತ ಚೀನಾ ದೇಶಗಳಿಂದ ಅಪಾಯ ಎದುರಿಸುತ್ತಿದ್ದು ಪಾಕಿಸ್ತಾನಕ್ಕೆ ಚೀನಾ ತನ್ನ 5ನೇ ತಲೆಮಾರಿನ ಯುದ್ಧವಿಮಾನಗಳನ್ನು ನೀಡಲು ಮುಂದಾಗುತ್ತಿದೆ. ಅಲ್ಲದೆ ತಾನೂ ಕೂಡ 6ನೇ ತಲೆಮಾರಿನ ಯುದ್ಧ ವಿಮಾನವನ್ನು ಪರೀಕ್ಷೆಗೊಳಪಡಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ತನ್ನ ವಾಯುಪಡೆ ಬಲಗೊಳಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.
ಭಾರತ ಮತ್ತು ರಷ್ಯಾ ಈ ಹಿಂದೆ ಐದನೇ ತಲೆಮಾರಿನ ಯುದ್ಧ ವಿಮಾನ ಕಾರ್ಯಕ್ರಮದ ಒಪ್ಪಂದ ಮಾಡಿಕೊಂಡಿದ್ದವು. ಆದರೆ, ವೆಚ್ಚ, ತಂತ್ರಜ್ಞಾನ ವರ್ಗಾವಣೆ ಮತ್ತು ಕಾರ್ಯಕ್ಷಮತೆಯ ಆತಂಕದ ಕುರಿತು ಭಿನ್ನಾಭಿಪ್ರಾಯಗಳಿಂದ ಈ ಯೋಜನೆಯನ್ನು 2018ರಲ್ಲಿ ಸ್ಥಗಿತಗೊಳಿಸಲಾಯಿತು. ರಷ್ಯಾ ಈ ಕಳವಳಗಳನ್ನು ಪರಿಹರಿಸಿದರೆ, ಭಾರತವು SU-57 ಉತ್ಪಾದನೆಗೆ ಪಾಲುದಾರಿಕೆಯನ್ನು ಮರುಪರಿಶೀಲಿಸಬಹುದು ಎಂದು ತಜ್ಞರು ಹೇಳಿದ್ದಾರೆ.