ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪವನ್ ಅವರು ಈ ವರ್ಷದ ಕೊನೆಯಲ್ಲಿ ತಮ್ಮ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಿಸಿದ್ದು, ಶೀಘ್ರದಲ್ಲೇ ನರೇಂದ್ರ ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಎಲ್‌ಜೆಪಿ (ಆರ್‌ವಿ) ಪಕ್ಷದ ಬಿಹಾರ ಉಸ್ತುವಾರಿ ಮತ್ತು ಜಮುಯಿ ಸಂಸದ ಅರುಣ್ ಭಾರ್ತಿ ಅವರು ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಔಪಚಾರಿಕ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ಭಾನವಾರ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮೀಸಲು ಸ್ಥಾನದ ಬದಲು ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸುವಂತೆ ಅವರನ್ನು ವಿನಂತಿಸಲಾಗಿದೆ ಎಂದು ಹೇಳಿದ್ದಾರೆ. ಜೂನ್ 8 ರಂದು ಭೋಜ್‌ಪುರ ಜಿಲ್ಲೆಯ ಅರಾದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಅವರು ರಾಜ್ಯ ರಾಜಕೀಯಕ್ಕೆ ಮರಳುವುದನ್ನು ಘೋಷಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಚಿರಾಗ್ ಒಂದು ನಿರ್ದಿಷ್ಟ ಸಮುದಾಯದ ನಾಯಕನಲ್ಲದ ಕಾರಣ, ರಾಜ್ಯ ರಾಜಕೀಯದಲ್ಲಿ ಅವರು ದೊಡ್ಡ ಪಾತ್ರಕ್ಕೆ ಸಿದ್ಧರಾಗಿದ್ದಾರೆ ಎಂಬ ಸಂದೇಶವನ್ನು ಕಳುಹಿಸಲು ಪಕ್ಷವು ಅವರನ್ನು ಮೀಸಲು ಸ್ಥಾನದ ಬದಲು ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸುವಂತೆ ಬಯಸುತ್ತದೆ ಎಂದು ಭಾರ್ತಿ ಹೇಳಿದ್ದಾರೆ.
ಈ ಬಾರಿ ಸಾಮಾಜಿಕ ನ್ಯಾಯವು ಪ್ರಮುಖ ಚುನಾವಣಾ ವಿಷಯವಾಗಿ ಹೊರಹೊಮ್ಮುತ್ತಿರುವುದರಿಂದ, ಚಿರಾಗ್ ಅವರ ರಾಜ್ಯ ರಾಜಕೀಯ ಪ್ರವೇಶವು ಆಡಳಿತಾರೂಢ ಎನ್‌ಡಿಎಗೆ ಪ್ರಯೋಜನ ನೀಡಲಿದೆ ಎಂದು ಹೇಳಲಾಗುತ್ತದೆ. ಜೂನ್ 8 ರಂದು ಭೋಜ್‌ಪುರದ ಅರಾದಲ್ಲಿ ‘ನವ ಸಂಕಲ್ಪ ಮಹಾಸಭಾ’ವನ್ನು ಎಲ್‌ಜೆಪಿ(ಆರ್‌ವಿ) ಆಯೋಜಿಸಲು ಸಜ್ಜಾಗಿದ್ದು, ಈ ಸಂದರ್ಭದಲ್ಲಿ ಚಿರಾಗ್ ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆ ಘೋಷಿಸಲಿದ್ದಾರೆ.
ಚಿರಾಗ್ ಅವರು ರಾಜ್ಯ ರಾಜಕೀಯದತ್ತ ಗಮನಹರಿಸಲು ಮತ್ತು ರಾಷ್ಟ್ರೀಯ ರಾಜಕೀಯಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎಲ್‌ಜೆಪಿ(ಆರ್‌ವಿ)ಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಔಪಚಾರಿಕ ವಿನಂತಿಯನ್ನು ಮಾಡುವ ನಿರ್ಣಯವನ್ನು ಇತ್ತೀಚಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಪಕ್ಷದ ನಾಯಕ ಭಾರ್ತಿ ತಿಳಿಸಿದ್ದಾರೆ.
ಮುಂದಿನ ಭಾನುವಾರ (ಜೂನ್ 8) ಚಿರಾಗ್ ತಮ್ಮ ಯೋಜನೆಗಳ ಕುರಿತು ಔಪಚಾರಿಕ ಘೋಷಣೆ ಮಾಡುವವರೆಗೆ ಕಾಯಿರಿ” ಎಂದು ಅವರು ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಲು ಜೂನ್ 30 ರಂದು (ಪ್ರಧಾನಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ದಿನ) ರೋಹ್ತಾಸ್ ಜಿಲ್ಲೆಯ ಬಿಕ್ರಮ್‌ಗಂಜ್‌ನಲ್ಲಿ ಪಕ್ಷದ ಹಿರಿಯ ನಾಯಕರು ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಸ್ಥಾನಗಳ ಸಂಖ್ಯೆಯ ಬಗ್ಗೆಯೂ ಚರ್ಚಿಸಲಾಯಿತು. ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಒದಗಿಸುವಂತೆ ಎಲ್‌ಜೆಪಿ (ಆರ್‌ವಿ) ಉನ್ನತ ಎನ್‌ಡಿಎ ನಾಯಕರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಿದೆ ಎಂದು ಮೂಲವೊಂದು ತಿಳಿಸಿದೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ವಿವಾದಾತ್ಮಕ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಆರ್‌ಜೆಡಿಯಿಂದ ಉಚ್ಚಾಟಿಸಲ್ಪಟ್ಟ ಒಂದು ವಾರದ ನಂತರ ಮೌನ ಮುರಿದಿದ್ದಾರೆ. ಪಕ್ಷದ ಹೊರಗೆ ಮತ್ತು ಒಳಗೆ ದೇಶದ್ರೋಹಿಗಳಿದ್ದಾರೆ ಎಂದು ಹೇಳಿದರು.