ಅಹಮದಾಬಾದ್: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ ದೇಶಾದ್ಯಂತ ಸಂಚಲನ ಮೂಡಿಸಿದ್ದು, ತನ್ನನ್ನು ಅಗಲಿದ ಪತ್ನಿಯ ಅಸ್ಥಿ ವಿಸರ್ಜನೆಗಾಗಿ ಭಾರತಕ್ಕೆ ಬಂದಿದ್ದ ಲಂಡನ್ ಪ್ರಜೆ ಕೂಡ ಇದೇ ದುರಂತದಲ್ಲಿ ಸಾವನ್ನಪ್ಪಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಗುಜರಾತ್ ನ ಅಹ್ಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಐದೇ ನಿಮಿಷದಲ್ಲಿ ಏರ್ ಇಂಡಿಯಾ ವಿಮಾನವು ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿತು.
ಈ ಘಟನೆಯಲ್ಲಿ ವಿಮಾನದಲ್ಲಿದ್ದ ಓರ್ವ ವ್ಯಕ್ತಿಯನ್ನು ಹೊರತುಪಡಿಸಿ, ಪೈಲಟ್‌ಗಳು ಮತ್ತು ಸಿಬ್ಬಂದಿಗಳು ಸೇರಿ ಎಲ್ಲರೂ ಪ್ರಾಣ ಕಳೆದುಕೊಂಡರು.
ಇನ್ನೂ ಆಘಾತಕಾರಿ ವಿಚಾರ ಎಂದರೆ ವಿಮಾನ ಅಪ್ಪಳಿಸಿದ ವೈದ್ಯಕೀಯ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತರ ಅಂತಿಮ ಪ್ರಯಾಣದ ಕಥೆಗಳು ಹೃದಯವಿದ್ರಾವಕವಾಗಿವೆ.
ಈ ಪೈಕಿ ತನ್ನನ್ನು ಅಗಲಿದ ಪತ್ನಿಯ ಅಸ್ಥಿ ವಿಸರ್ಜನೆಗಾಗಿ ಭಾರತಕ್ಕೆ ಬಂದಿದ್ದ ಲಂಡನ್ ಪ್ರಜೆ ಕೂಡ ಇದೇ ದುರಂತದಲ್ಲಿ ಸಾವನ್ನಪ್ಪಿರುವ ವಿಚಾರ ಕೂಡ ಸೇರಿದೆ.
ಅಮ್ರೇಲಿ ಜಿಲ್ಲೆಯ ಅರ್ಜುನ್‌ಭಾಯ್ ಮನುಭಾಯ್ ಪಟೋಲಿಯಾ ಎಂಬುವವರು ಕಳೆದ ಕೆಲವು ವರ್ಷಗಳಿಂದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಲಂಡನ್‌ನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಇತ್ತೀಚೆಗೆ, ಅರ್ಜುನ್ ಅವರ ಪತ್ನಿ ಲಂಡನ್‌ನಲ್ಲಿ ನಿಧನರಾದರು.
ಅರ್ಜುನ್‌ಭಾಯ್ ಮನುಭಾಯ್ ಅವರ ಪತ್ನಿಯ ಕೊನೆಯ ಆಸೆಯಂತೆ ಅವರ ಚಿತಾಭಸ್ಮವನ್ನು ವಿಸರ್ಜಿಸಲು ಪತ್ನಿಯ ತವರೂರಿಗೆ ಬಂದಿದ್ದರು. ತಮ್ಮ ಇಬ್ಬರು ಮಕ್ಕಳನ್ನು ಲಂಡನ್‌ನಲ್ಲಿ ಬಿಟ್ಟು ಭಾರತಕ್ಕೆ ಬಂದಿದ್ದರು.
ತವರೂರಿನಲ್ಲಿ ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ಪತ್ನಿಯ ಅಸ್ಥಿ ವಿಸರ್ಜಿಸಿ ನಂತರ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಿ ಅವರು ಲಂಡನ್‌ಗೆ ಮರಳಿದ್ದರು. ಅದರಂತೆ ಗುರುವಾರ (ಜೂನ್ 12) ಏರ್ ಇಂಡಿಯಾ-ಎಐ 171 ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಹತ್ತಿದ್ದ ಅರ್ಜುನ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ಸೂರತ್ ನಲ್ಲಿ ವಾಸವಿರುವ ಅರ್ಜುನ್ ಕುಟುಂಬ ಈಗಾಗಲೇ ಸಾಕಷ್ಟು ನೋವು ಕಂಡಿದೆ. ಅರ್ಜುನ್ ಅವರ ಮದುವೆಗೊ ಮೊದಲೇ ಅರ್ಜುನ್ ತಂದೆ ನಿಧನರಾಗಿದ್ದರು.ಅವರ ತಾಯಿ ಸೂರತ್‌ನಲ್ಲಿ ವಾಸಿಸುತ್ತಿದ್ದಾರೆ. ಲಂಡನ್‌ನಲ್ಲಿರುವ ಇಬ್ಬರು ಮಕ್ಕಳು ಈ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.
ತಾಯಿಯ ಸಾವಿನಿಂದ ದುಃಖಿತರಾಗಿದ್ದ ಮಕ್ಕಳು ಈಗ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಲಂಡನ್‌ನಲ್ಲಿರುವ ಅರ್ಜುನ್‌ಭಾಯ್ ಅವರ ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬ ಸದಸ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಇಬ್ಬರೂ ಪೋಷಕರು ಸತ್ತ ನಂತರ ಅವರನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಚರ್ಚಿಸುತ್ತಿದ್ದೇವೆ ಎಂದು ಅರ್ಜುನ್ ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.