ಪಾಟ್ನಾ: ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನಿದು ವಿವಾದ: ಇತ್ತೀಚಿಗೆ ತಮ್ಮ 78ನೇ ಜನ್ಮ ದಿನವನ್ನು ಆಚರಿಸಿಕೊಂಡ ಲಾಲು ಪ್ರಸಾದ್ ಯಾದವ್ ಅವರಿಗೆ ಅಭಿಮಾನಿಗಳು ಅಂಬೇಡ್ಕರ್ ಭಾವಚಿತ್ರವನ್ನು ನೀಡಿದ್ದರು. ಆದರೆ, ಲಾಲು ಪ್ರಸಾದ್ ಯಾದವ್ ಅವರು ಅದನ್ನು ತಮ್ಮ ಕಾಲಿನ ಬಳಿ ಇಡುವಂತೆ ಸೂಚಿಸಿದ್ದಾರೆ. ಅಹಂಕಾರದಿಂದ ವರ್ತಿಸಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಆರೋಪಿಸಿದ್ದಾರೆ.
ಲಾಲು ಪ್ರಸಾದ್ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಆರೋಪವನ್ನು ತಿರಸ್ಕರಿಸಿರುವ ತೇಜಸ್ವಿ ಯಾದವ್, ಬಾಬಾ ಸಾಹೇಬ್, ಸಂವಿಧಾನ ಮತ್ತು ಮೀಸಲಾತಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಲಾಲು ಯಾದವ್ ಬಿಹಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನೇಕ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ನಾವು ಅಂಬೇಡ್ಕರ್ ಅವರ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟವರು. ಲಾಲು ಪ್ರಸಾದ್ ಯಾದವ್ ಅವರು 78ನೇ ವಯಸ್ಸಿನಲ್ಲಿ 10 ಗಂಟೆಗಳ ಕಾಲ ಕೆಲಸ ಮಾಡಿ ಜನರನ್ನು ಭೇಟಿಯಾಗುತ್ತಾರೆ ಎಂದು ತಿಳಿಸಿದ್ದಾರೆ.