ಅಹಮದಾಬಾದ್: ಅಹಮದಾಬಾದ್'ನ ಮೇಘನಿ ನಗರದ ಬಿ.ಜೆ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪತನಗೊಂಡಿದ್ದ ಏರ್ ಇಂಡಿಯಾ ಬೋಯಿಂಗ್ 787–8 ವಿಮಾನದ ಎರಡನೆಯ ಬ್ಲ್ಯಾಕ್ ಬಾಕ್ಸ್ ಭಾನುವಾರ ಪತ್ತೆಯಾಗಿದೆ.
ವಿಮಾನದಲ್ಲಿ 2 ಬ್ಲ್ಯಾಕ್ ಬಾಕ್ಸ್‌ಗಳಿದ್ದವು. ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿತ್ತು. ʻಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ʼ ಭಾನುವಾರ ಪತ್ತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ಅವರು ತಿಳಿಸಿದ್ದಾರೆ.
2ನೇ ಬ್ಲ್ಯಾಕ್ ಬಾಕ್ಟ್ ಪ್ರಕರಣದ ತನಿಖೆಗೆ ನಿರ್ಣಾಯಕವಾಗಿದ್ದು, ಇದು ದುರಂತ ಸಂದರ್ಭದಲ್ಲಿ ಪ್ರತಿ ಸೆಕೆಂಡ್‌ನಲ್ಲಿ ಏನಾಯ್ತು ಎಂಬುದನ್ನ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕಾಕ್‌ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್‌ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ.
ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದೂ ಕರೆಯಲಾಗುತ್ತೆ.
ಬ್ಲ್ಯಾಕ್ ಬಾಕ್ಸ್‌ಗಳನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಏಕೆಂದರೆ ಅಪಘಾತದ ಸಂದರ್ಭದಲ್ಲಿ ಈ ಭಾಗವು ಹೆಚ್ಚು ಸುರಕ್ಷಿತವಾಗಿ ಇರಬೇಕು ಎಂದು ವಿಮಾನದ ಹಿಂಭಾಗದಲ್ಲಿ ಇರಿಸಲಾಗಿರುತ್ತದೆ.
ಈ ಬ್ಲ್ಯಾಕ್ ಬಾಕ್ಸ್‌ಗಳು ವಿಮಾನದ ಕಾರ್ಯಾಚರಣೆಯ ಮಾಹಿತಿ ಮತ್ತು ಕಾಕ್‌ಪಿಟ್ ಸಂಭಾಷಣೆಗಳನ್ನು ದಾಖಲಿಸುತ್ತದೆ. ಇದರ ಮುಖ್ಯ ಉದ್ದೇಶ ವಿಮಾನ ಅಪಘಾತದ ಸಂದರ್ಭದಲ್ಲಿ ಕಾರಣಗಳನ್ನು ತನಿಖೆ ಮಾಡಲು ಸಹಾಯ ಮಾಡುತ್ತೆ. ಇದರಲ್ಲಿ ಇನ್ನೊಂದು ಅಂಶ ಏನೆಂದರೆ ಈ black box ಮೇಲೆ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಆದರೆ ಇದರ ಒಳಗಡೆ ಕಪ್ಪು ಬಣ್ಣ ಇರುತ್ತದೆ. ಏಕೆಂದರೆ ವಿಮಾನ ದುರಂತ ಸಂಭವಿಸಿದಾಗ ಕಪ್ಪು ಬಣ್ಣ ಕಣ್ಣಿಗೆ ಬೇಗ ಕಾಣಿಸಲಿ ಅನ್ನೋದೆ ಇದರ ಉದ್ದೇಶವಾಗಿದೆ. ಹೀಗಾಗಿ ಇದನ್ನು ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಮತ್ತು ಇತರ ರೆಕಾರ್ಡರ್ಗಳನ್ನು ಪ್ರಯೋಗಾಲಯಕ್ಕೆ ತಂದ ಬಳಿಕ, ತಜ್ಞರು ಅವುಗಳ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಡೇಟಾವನ್ನು ಸುಲಭವಾಗಿ ರಿಟ್ರೀವ್ ಮಾಡಬಹುದೇ ಎಂದು ಪರಿಶೀಲಿಸುತ್ತಾರೆ. ಅವುಗಳು ಸಮರ್ಪಕ ಸ್ಥಿತಿಯಲ್ಲಿದ್ದರೆ ಡೇಟಾವನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ, ಹಾನಿಗೊಳಗಾಗಿದ್ದರೆ ಡೇಟಾ ರಿಟ್ರೀವ್ ಮಾಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ತನಿಖೆಯ ಅತ್ಯಂತ ಸೂಕ್ಷ್ಮ ಅಂಶವೆಂದರೆ, ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಅನ್ನು ಪರಿಶೀಲಿಸುತ್ತದೆ.
ಅಷ್ಟೇ ಅಲ್ಲದೇ ವಿಮಾನದ ಎಂಜಿನ್ ವೇಗ, ಎತ್ತರ, ದಿಕ್ಕು, ಇಂಧನ ಮಟ್ಟ, ಮತ್ತು ಇತರ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತದೆ. ಈ ಡೇಟಾವನ್ನು ಸಂವೇದಕಗಳ ಮೂಲಕ ಸಂಗ್ರಹಿಸಿ, ಕ್ರ್ಯಾಶ್-ನಿರೋಧಕ ಮೆಮೊರಿಯಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸಾಮಾನ್ಯವಾಗಿ 25 ಗಂಟೆಗಳವರೆಗಿನ ಡೇಟಾವನ್ನು ದಾಖಲಿಸುತ್ತದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಪೈಲಟ್‌ಗಳ ಸಂಭಾಷಣೆ, ರೇಡಿಯೋ ಸಂವಹನ, ಮತ್ತು ಕಾಕ್‌ಪಿಟ್‌ನಲ್ಲಿನ ಶಬ್ದಗಳನ್ನು (ಎಂಜಿನ್ ಶಬ್ದ, ಎಚ್ಚರಿಕೆ ಸಿಗ್ನಲ್‌ಗಳು) ರೆಕಾರ್ಡ್ ಮಾಡುತ್ತದೆ. ಇದು ಕೊನೆಯ 2 ಗಂಟೆಗಳ ಸಂಭಾಷಣೆಯನ್ನು ಸಂಗ್ರಹಿಸುತ್ತದೆ.
ಜೂನ್ 12ರಂದು (ಗುರುವಾರ) ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಅಪಘಾತಕ್ಕೀಡಾಯಿತು. ಅಂದು ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು.
ಇದರಿಂದ ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ ಎಂದು ಏರ್ ಇಂಡಿಯಾ ಖಚಿತಪಡಿಸಿತು. ಈ ಕುರಿತು ಇದೀಗ ವಿವಿಧ ತನಿಖಾ ಸಂಸ್ಥೆಗಳು ಹಾಗೂ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿವೆ.
ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ರನ್ ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ `ಮೇ ಡೇ.. ಮೇ ಡೇ..’ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು.
ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು.