ಮುಂಬೈ: ಬಾಂಬ್ ಬೆದರಿಕೆ ಸಂದೇಶ ಬಂದ ನಂತರ ದೆಹಲಿಗೆ ಹೊರಟಿದ್ದ ಇಂಡಿಗೊ ವಿಮಾನ ಮಂಗಳವಾರ ನಾಗ್ಪುರದಲ್ಲಿ ತುರ್ತು ಲ್ಯಾಂಡಿಂಗ್ ಆಗಿರುವುದಾಗಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಸಿಐಎಎಲ್ ) ತಿಳಿಸಿದೆ.
ಮಸ್ಕತ್ ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೋಗುತ್ತಿದ್ದ ವಿಮಾನದಲ್ಲಿ 157 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಸಂಚರಿಸುತ್ತಿದ್ದರು. ಬೆಳಗ್ಗೆ 9-31ರ ಸುಮಾರಿನಲ್ಲಿ ವಿಮಾನದ ಅಧಿಕೃತ ಇ-ಮೇಲ್ ಖಾತೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಬಾಂಬ್ ಬೆದರಿಕೆ ಪರಿಶೀಲಿನಾ ಸಮಿತಿಯನ್ನು ಸಂಪರ್ಕಿಸಲಾಯಿತು. ಬಳಿಕ ವಿಮಾನ ತಪಾಸಣೆಗಾಗಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು ಎಂದು ಸಿಐಎಎಲ್ ತಿಳಿಸಿದೆ.
ನಾಗ್ಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿರುವುದಾಗಿ ಇಂಡಿಗೊ ಹೇಳಿಕೆಯಲ್ಲಿ ತಿಳಿಸಿದೆ.