ತಿರುವನಂತಪುರಂ: ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಇದೆ. ಆದರೆ ಕಾಂಗ್ರೆಸ್ ಪಕ್ಷ, ಅದರ ಮೌಲ್ಯಗಳು ಮತ್ತು ಅದರ ಕಾರ್ಯಕರ್ತರು ನನಗೆ ಅತ್ಯಂತ ಪ್ರಿಯರು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಹೇಳಿದ್ದಾರೆ.
"ನಿಮಗೆ ತಿಳಿದಿರುವಂತೆ, ಪ್ರಸ್ತುತ ಕಾಂಗ್ರೆಸ್ ನಾಯಕತ್ವದೊಂದಿಗೆ ನನಗೆ ಭಿನ್ನಾಭಿಪ್ರಾಯಗಳಿವೆ. ಅವರಲ್ಲಿ ಕೆಲವರು ಸಾರ್ವಜನಿಕ ಜೀವನದಲ್ಲಿದ್ದಾರೆ ಮತ್ತು ಅವರು ಯಾರು ಅಂತ ನಿಮಗೆ ಗೊತ್ತು. ಅವರೊಂದಿಗೆ ನೇರವಾಗಿ ಮಾತನಾಡುವ ಮೂಲಕ ಪಕ್ಷದೊಳಗೆ ಅದನ್ನು ಬಗೆಹರಿಸಿಕೊಳ್ಳುವುದು ಉತ್ತಮ" ಎಂದು ಶಶಿ ತರೂರ್ ಹೇಳಿದ್ದಾರೆ.
ಇನ್ನು ನಿಲಂಬೂರು ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲಿಲ್ಲ. ಏಕೆಂದರೆ ತಮಗೆ ಪಕ್ಷದಿಂದ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ಹಿರಿಯ ಸಂಸದ ತಿಳಿಸಿದ್ದಾರೆ.
"ಕಾಂಗ್ರೆಸ್ ಪಕ್ಷ, ಅದರ ಮೌಲ್ಯಗಳು ಮತ್ತು ಅದರ ಕಾರ್ಯಕರ್ತರು ನನಗೆ ಪ್ರಿಯರು. ನಾನು ಕಳೆದ 16 ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಅವರ ಬದ್ಧತೆ, ಸಮರ್ಪಣೆ ಮತ್ತು ಆದರ್ಶವಾದವನ್ನು ನಾನು ನೋಡಿದ್ದೇನೆ" ಎಂದು ಅವರು ಹೇಳಿದರು.
ನಿಮ್ಮ ಭಿನ್ನಾಭಿಪ್ರಾಯ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಇದೆಯೇ ಅಥವಾ ಪಕ್ಷದ ರಾಜ್ಯ ನಾಯಕತ್ವದೊಂದಿಗೆ ಇದೆಯೇ ಎಂದು ಕೇಳಿದಾಗ, ಅವರು ಆ ಪ್ರಶ್ನೆಯಿಂದ ತಪ್ಪಿಸಿಕೊಂಡರು, ವಿಧಾನಸಭಾ ಉಪಚುನಾವಣೆಯಲ್ಲಿ ಮತದಾನ ನಡೆಯುತ್ತಿರುವುದರಿಂದ ಈಗ ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದಷ್ಟೇ ಹೇಳಿದರು.
"ಇಂದು ಆ ವಿಷಯಗಳ ಬಗ್ಗೆ(ನಾಯಕತ್ವದೊಂದಿಗಿನ ಅವರ ಭಿನ್ನಾಭಿಪ್ರಾಯಗಳು) ಮಾತನಾಡುವ ಸಮಯವಲ್ಲ. ಏಕೆಂದರೆ ಮತದಾನ ನಡೆಯುತ್ತಿದೆ. ಅಲ್ಲಿ ನನ್ನ ಸ್ನೇಹಿತ(ಕಾಂಗ್ರೆಸ್ ಅಭ್ಯರ್ಥಿ) ಆರ್ಯಾದನ್ ಶೌಕತ್ ಗೆಲ್ಲುವುದನ್ನು ನಾನು ಬಯಸುತ್ತೇನೆ. ಪಕ್ಷದ ನಾಯಕತ್ವದೊಂದಿಗಿನ ನನ್ನ ಕೆಲವು ಭಿನ್ನಾಭಿಪ್ರಾಯಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಆದ್ದರಿಂದ ಅದನ್ನು ಮರೆಮಾಚಲು ಸಾಧ್ಯವಿಲ್ಲ" ಎಂದು ಶಶಿ ತರೂರ್ ತಿಳಿಸಿದ್ದಾರೆ.
"ನಮ್ಮ ಕಾಂಗ್ರೆಸ್ ಕಾರ್ಯಕರ್ತರು ನಿಲಂಬೂರಿನಲ್ಲಿ ಪಕ್ಷದ ಅಭ್ಯರ್ಥಿಗೆ ಗೆಲುವಿಗಾಗಿ ಶ್ರಮಿಸಿದ್ದಾರೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಮಗೆ ಅತ್ಯುತ್ತಮ ಅಭ್ಯರ್ಥಿ ಇದ್ದಾರೆ. ಅವರು ಗೆಲ್ಲುವುದನ್ನು ಬಯಸುತ್ತೇನೆ" ಎಂದು ಅವರು ಹೇಳಿದರು.