ತಿರುಪತಿ: ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ತೆರಳುವ ಭಕ್ತರಿಗೆ ಮತ್ತೊಂದು ಖುಷಿ ವಿಚಾರ ಸಿಕ್ಕಿದೆ. ಟಿಟಿಡಿ ಇತ್ತೀಚೆಗೆ ತಿರುಮಲದಲ್ಲಿ ಲಡ್ಡು ಮಾರಾಟ ಮಳಿಗೆಗಳನ್ನು ಪರಿಚಯಿಸಿದೆ.
ಭಕ್ತರು UPI ಪಾವತಿ ಮೂಲಕ ಹೆಚ್ಚುವರಿ ಲಡ್ಡು ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಪಾವತಿ ನಂತರ ದೊರೆಯುವ ರಶೀದಿಯೊಂದಿಗೆ ಹೆಚ್ಚುವರಿ ಲಡ್ಡುಗಳನ್ನು ಭಕ್ತರು ಪಡೆಯಬಹುದಾಗಿದೆ.
ಭಕ್ತರು ಲಡ್ಡುಗಾಗಿ ಉದ್ದವಾದ ಸರತಿ ಸಾಲಿನಲ್ಲಿ ಧೀರ್ಘ ಹೊತ್ತು ಕಾಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಭಕ್ತರು ಇಂಟರ್‌ಫೇಸ್‌ನ ಮೂಲಕ ಮಾರಾಟ ಮಳಿಗೆಗಳಲ್ಲಿ ತ್ವರಿತವಾಗಿ ಲಡ್ಡು ಸಂಗ್ರಹಿಸಬಹುದು. UPI ಪಾವತಿ ಆಯ್ಕೆಗಳ ಲಭ್ಯತೆಯಿಂದ ತಡೆರಹಿತ, ನಗದು ರಹಿತ ವಹಿವಾಟನ್ನು ಖಾತ್ರಿಪಡಿಸಲಾಗಿದೆ.
ಲಡ್ಡುಗಳಿಗಾಗಿ ಮಳಿಗೆಗಳನ್ನು ಸಂಪರ್ಕಿಸುವ ವಿಧಾನ: ಭಕ್ತರು ಲಡ್ಡು ವಿತರಣಾ ಕೌಂಟರ್‌ಗಳ ಬಳಿ ಸ್ಥಾಪಿಸಲಾದ ಮಳಿಗೆಗಳನ್ನು ಸಂಪರ್ಕಿಸಿದಾಗ ಎರಡು ಆಯ್ಕೆಗಳಿರುತ್ತವೆ. ಒಂದು ದರ್ಶನದ ಟಿಕೆಟ್ ಹೊಂದಿರುವವರಿಗೆ ಇದ್ದರೆ, ಮತ್ತೊಂದು ದರ್ಶನದ ಟಿಕೆಟ್ ಇಲ್ಲದವರಿಗೆ ಇರುತ್ತದೆ. ಅಂತರ್ನಿರ್ಮಿತ ವ್ಯವಸ್ಥೆಯು ಟಿಕೆಟ್ ವಿವರಗಳನ್ನು ಪರಿಶೀಲಿಸುತ್ತದೆ. ಯಾತ್ರಿಕರು ತಲಾ ಎರಡು ಲಡ್ಡುಗಳನ್ನು ಖರೀದಿಸಬಹುದು. ದರ್ಶನದ ಟಿಕೆಟ್ ಇಲ್ಲದವರಿಗೆ ಆಧಾರ್ ಕಾರ್ಡ್ ಆಧಾರದ ಮೇಲೆ ಲಡ್ಡುಗಳನ್ನು ಮಾರಾಟ ಮಾಡಲಾಗುತ್ತದೆ. ಯುಪಿಐ ಮೂಲಕ ಪಾವತಿಸಬೇಕಾಗುತ್ತದೆ.
ಭಕ್ತರು ಲಡ್ಡು ಸ್ವೀಕರಿಸಲು ರಸೀದಿ ಸಂಗ್ರಹಿಸಿ, ಕೌಂಟರ್‌ಗಳಿಗೆ ಹೋಗಬಹುದು. ಟಿಟಿಡಿಯ ಈ ವಿನೂತನ ಉಪಕ್ರಮಕ್ಕೆ ಭಕ್ತರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.