ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಮಂಗಳವಾರ ಬಾವಿಗೆ ಬಿದ್ದ ಮೊಬೈಲ್ ಫೋನ್ ಅನ್ನು ಹೊರತೆಗೆಯಲು ಯತ್ನಿಸಿದ ಮೂವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಧ್ರುವ(25) ತನ್ನ ಸೋದರಸಂಬಂಧಿ ಅಜಯ್ (28) ಮತ್ತು ಆತನ ಸ್ನೇಹಿತ ಚಂದ್ರವೀರ್ ಜೊತೆ ಬಾವಿಯ ಅಂಚಿನಲ್ಲಿ ಕುಳಿತಿದ್ದಾಗ, ಕೈಯಲ್ಲಿದ್ದ ಮೊಬೈಲ್ ಫೋನ್ ಬಾವಿಗೆ ಬಿದ್ದಿದೆ.
ತಕ್ಷಣ ಧ್ರುವ ಮೊಬೈಲ್ ಹೊರತೆಗೆಯಲು ಬಾವಿಗೆ ಹಾರಿದ್ದಾರೆ. ಆದರೆ, ಅರ್ಧ ಗಂಟೆಯಾದರೂ ವಾಪಸ್ ಬರದಿದ್ದಾಗ, ಅಜಯ್ ಕೂಡ ಧ್ರುವನಿಗೆ ಸಹಾಯ ಮಾಡಲು ಬಾವಿಗೆ ಹಾರಿದ್ದಾರೆ. ಇಬ್ಬರೂ ಹಿಂತಿರುಗದಿದ್ದಾಗ, ಚಂದ್ರವೀರ್ ಕೂಡ ಕೆಳಗೆ ಜಿಗಿದಿದ್ದಾನೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶು ರಾಜಾ ಅವರು ತಿಳಿಸಿದ್ದಾರೆ.
ಈ ಮೂವರು ಯುವಕರು ಬಾವಿಯಿಂದ ಮೇಲೆ ಬರದಿದ್ದಾಗ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಮ್ಲಜನಕ ಸಿಲಿಂಡರ್‌ಗಳನ್ನು ಕೆಳಗಿಳಿಸಿದ್ದಾರೆ.
ಸತತ ನಾಲ್ಕು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ, ಮೂವರು ಯುವಕರನ್ನು ಬಾವಿಯಿಂದ ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಅಲ್ಲಿ ಮೂವರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ರಾಜಾ ಹೇಳಿದ್ದಾರೆ.
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾವಿ ಆ ಕುಟುಂಬದ ಪೂರ್ವಜರ ಸ್ಥಳದಲ್ಲಿದ್ದು, ಅದರಲ್ಲಿ ರೂಪುಗೊಂಡ ಮೀಥೇನ್ ಅನಿಲ ಉಸಿರಾಡಿರುವುದರಿಂದ ಮೂವರೂ ಸಾವನ್ನಪ್ಪಿರಬಹುದು ಎಂದು ವಿಶು ರಾಜಾ ಅವರು ಹೇಳಿದ್ದಾರೆ.