ಮುಂಬೈ: 2023 ರಲ್ಲಿ ಶಿವಸೇನಾ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ನಾಯಕ ಸಂಜಯ್ ರಾವತ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯ ಗುರುವಾರ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗಲು ವಿಫಲರಾದ ಸಚಿವ ನಿತೇಶ್ ರಾಣೆ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲಾಗಿದೆ.
ಜೂನ್ 2 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಬಿಜೆಪಿ ನಾಯಕ ರಾಣೆ, ಹಾಜರಾತಿಯಿಂದ ಶಾಶ್ವತ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಆದಾಗ್ಯೂ, ಗುರುವಾರ, ಮಜ್ಗಾಂವ್ ಜೆಎಂಎಫ್ ಸಿ ನ್ಯಾಯಾಧೀಶ ಎ ಎ ಕುಲಕರ್ಣಿ ಅವರು, ಮಹಾರಾಷ್ಟ್ರ ಸಚಿವರಿಗೆ ಶಾಶ್ವತ ವಿನಾಯಿತಿ ನಿರಾಕರಿಸಿ ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ಬಳಿಕ ಪ್ರಕರಣದ ವಿಚಾರಣೆಯನ್ನು ಜುಲೈ 18 ಕ್ಕೆ ಮುಂದೂಡಲಾಗಿದೆ.
ಇದಕ್ಕೂ ಮೊದಲು, ಪ್ರಕರಣದ ವಿಚಾರಣೆಯಲ್ಲಿ ಹಾಜರಾಗಲು ವಿಫಲರಾದ ಬಿಜೆಪಿ ನಾಯಕ ರಾಣೆ ವಿರುದ್ಧ ನ್ಯಾಯಾಲಯವು ಹಲವು ವಾರಂಟ್‌ಗಳನ್ನು ಹೊರಡಿಸಿತ್ತು.
ಮೇ 2023 ರಲ್ಲಿ, ಮಾಜಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ ಅವರು, ಸಂಜಯ್ ರಾವತ್ ಅವರನ್ನು 'ಹಾವು' ಎಂದು ಕರೆದಿದ್ದರು. ಅವರು ಉದ್ಧವ್ ಠಾಕ್ರೆಯನ್ನು ತೊರೆದು ಆ ವರ್ಷದ ಜೂನ್ ವೇಳೆಗೆ(ಅವಿಭಜಿತ) ಎನ್ ಸಿಪಿ ಸೇರುತ್ತಾರೆ ಎಂದು ಆರೋಪಿಸಿದ್ದರು.