ನವದೆಹಲಿ: ಪಾಕಿಸ್ತಾನಕ್ಕೆ ಎಷ್ಟು ಕೆಟ್ಟರೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ ತಿಂಗಳಲ್ಲಿ ನಡೆದ 'ಆಪರೇಷನ್ ಸಿಂಧೂರ್' ವೇಳೆ ಭಾರತೀಯ ಸೇನೆಯು ಧ್ವಂಸಗೊಳಿಸಿದ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳು ಮತ್ತು ತರಬೇತಿ ಶಿಬಿರಗಳನ್ನು ಮರು ನಿರ್ಮಾಣ ಮಾಡುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪಾಕ್ ಆಕ್ರಮಿಕ ಕಾಶ್ಮೀರ (POK) ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಈ ಭಯೋತ್ಪಾದಕ ಮೂಲ ಸೌಕರ್ಯಗಳನ್ನು ಪುನರ್ ನಿರ್ಮಾಣಕ್ಕೆ ಪಾಕ್ ಸೇನೆ, ಗುಪ್ತಚರ ಸಂಸ್ಥೆ ISI ಮತ್ತು ಸರ್ಕಾರ ಗಣನೀಯ ಪ್ರಮಾಣದ ಧನಸಹಾಯ ಮತ್ತು ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ ಎಂದು ವರದಿಯಾಗಿದೆ.
ಮೂರು ಪ್ರಮುಖ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (JeM) ಲಷ್ಕರ್-ಎ-ತೊಯ್ಬಾ (LeT) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಭಾರತೀಯ ಪಡೆಗಳು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿದ್ದವು. ಜಿಇಎಂ ಕಾರ್ಯಾಚರಣೆಗಳ ನರವ್ಯೋಹ ಎಂದೇ ಪರಿಗಣಿಸಲಾದ ಬಹವಾಲ್‌ಪುರದಲ್ಲಿರುವ ಜೆಎಂ ಪ್ರಧಾನ ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು.
ಏಲ್ಲೆಲ್ಲಿ ಶಿಬಿರ ನಿರ್ಮಾಣ: ಪಾಕ್ ಭಯೋತ್ಪಾದಕ ಸಂಘಟನೆಗಳು, ಐಎಸ್‌ಐ ಸಹಯೋಗದೊಂದಿಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ದಟ್ಟ ಅರಣ್ಯಗಳಲ್ಲಿ ಹೈಟೆಕ್, ಸಣ್ಣ ಭಯೋತ್ಪಾದಕ ಶಿಬಿರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ. ಕಣ್ಗಾವಲು ಮತ್ತು ವೈಮಾನಿಕ ದಾಳಿ ತಪ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲುನಿ, ಪುತ್ವಾಲ್, ತೈಪು ಪೋಸ್ಟ್, ಜಮಿಲಾ ಪೋಸ್ಟ್, ಉಮ್ರಾನ್ವಾಲಿ, ಚಪ್ರಾರ್, ಫಾರ್ವರ್ಡ್ ಕಹುಟಾ, ಚೋಟಾ ಚಾಕ್ ಮತ್ತು ಜಂಗ್ಲೋರಾ ಮತ್ತಿತರ ಪ್ರದೇಶಗಳಲ್ಲಿ ಮರು ನಿರ್ಮಾಣ ಮಾಡಲಾಗುತ್ತಿರುವ ಶಿಬಿರಗಳನ್ನು ಥರ್ಮಲ್ ಇಮೇಜರ್, ರಾಡಾರ್ ಮತ್ತು ಉಪಗ್ರಹ ಕಣ್ಗಾವಲು ಎದುರಿಸಲು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ.
ಮತ್ತೆ 13 ಲಾಂಚ್ ಪ್ಯಾಡ್‌ಗಳ ಅಭಿವೃದ್ಧಿ: ಕೆಲ್, ಶಾರ್ದಿ, ದುಧ್ನಿಯಾಲ್, ಅಥ್ಮುಕಾಮ್, ಜುರಾ, ಲೀಪಾ ವ್ಯಾಲಿ, ಪಚಿಬನ್ ಚಮನ್, ತಾಂಡಪಾನಿ, ನೈಯಾಲಿ ಸೇರಿದಂತೆ ಪಿಒಕೆ.ಲ್ಲಿ ಪಾಕಿಸ್ತಾನಿ ಸೇನೆ ಮತ್ತು ಐಎಸ್‌ಐ 13 ಲಾಂಚ್ ಪ್ಯಾಡ್‌ಗಳನ್ನು ಮರು ಅಭಿವೃದ್ಧಿಪಡಿಸುತ್ತಿವೆ.
ಇದಲ್ಲದೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಧ್ವಂಸಗೊಳಿಸಲಾದ ಅಂತಾರಾಷ್ಟ್ರೀಯ ಗಡಿಯಲ್ಲಿರುವ ನಾಲ್ಕು ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ಸಹ ಮತ್ತೆ ಸಕ್ರಿಯಗೊಳಿಸಲಾಗುತ್ತಿದೆ. ಇವುಗಳಲ್ಲಿ ಸಾಮಾನ್ಯ ಪಾಕಿಸ್ತಾನ ರೇಂಜರ್ಸ್ ಪೋಸ್ಟ್‌ಗಳು ಸೇರಿವೆ ಎಂದು ಮೂಲಗಳು ಹೇಳಿವೆ.
ಅಂತಾರಾಷ್ಟ್ರೀಯ ಗಡಿಯಲ್ಲಿ ISI ಹೊಸ ತಂತ್ರಗಳು: ISI ಜಮ್ಮು ವಲಯದ ಅಂತರಾಷ್ಟ್ರೀಯ ಗಡಿಯಲ್ಲಿ ನಾಲ್ಕು ಲಾಂಚ್‌ಪ್ಯಾಡ್‌ಗಳನ್ನು ಪುನರಾಭಿವೃದ್ಧಿ ಮಾಡುತ್ತಿದೆ ಎಂದು ವರದಿಯಾಗಿದೆ. ಒಂದೇ ಸ್ಥಳದಲ್ಲಿ ಉಗ್ರರ ಸಂಖ್ಯೆ ಹೆಚ್ಚಿಲ್ಲದಂತೆ ಮಾಡಲು ದೊಡ್ಡ ಶಿಬಿರಗಳನ್ನು ಚಿಕ್ಕದಾಗಿ ವಿಭಜಿಸುವ ಹೊಸ ತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ. ಪ್ರತಿಯೊಂದು ಮಿನಿ-ಕ್ಯಾಂಪ್ ತನ್ನದೇ ಆದ ಪರಿಧಿಯ ಭದ್ರತೆಯನ್ನು ಹೊಂದುವ ನಿರೀಕ್ಷೆಯಿದೆ.
ವಿಶೇಷವಾಗಿ ತರಬೇತಿ ಪಡೆದ ಪಾಕ್ ಸೇನಾ ಸಿಬ್ಬಂದಿಯಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಶಿಬಿರಗಳು ಥರ್ಮಲ್ ಸೆನ್ಸರ್‌ಗಳು, ರಾಡಾರ್ ವ್ಯವಸ್ಥೆಗಳು ಮತ್ತು ಡ್ರೋನ್ ವಿರೋಧಿ ತಂತ್ರಜ್ಞಾನಗಳಿಂದ ಸುಸಜ್ಜಿತವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಮಟ್ಟದ ಸಭೆ: ಬಹವಾಲ್ಪುರದಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಹಿರಿಯ ಕಮಾಂಡರ್‌ಗಳು ಮತ್ತು ಐಎಸ್‌ಐ ಅಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.