ಒಡಿಶಾ: ಗೇಮಿಂಗ್ ವ್ಯಸನಕ್ಕೆ ತುತ್ತಾಗಿದ್ದ 21 ವರ್ಷದ ಯುವಕನೋರ್ವ ತನ್ನ ಚಟಕ್ಕೆ ಹೆತ್ತವರು ಹಾಗೂ ಸಹೋದರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, 21 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನ ಆನ್‌ಲೈನ್ ಆಟಗಳ ಚಟಕ್ಕೆ ಆತನ ಹೆತ್ತವರು ಮತ್ತು ಸಹೋದರಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕ್ರುದ್ಧಗೊಂಡ ಯುವಕ, ಕಲ್ಲುಗಳಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗತ್ಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಯಬಾದ ಸೇಥಿ ಸಾಹಿಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಕಲ್ಲುಗಳು ಅಥವಾ ಯಾವುದೇ ಇತರ ಗಟ್ಟಿಯಾದ ವಸ್ತುಗಳನ್ನು ಬಳಸಿ ತಂದೆ, ತಾಯಿ ಮತ್ತು ಸಹೋದರಿಯ ತಲೆಯನ್ನು ಒಡೆದಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭವಾನಿ ಶಂಕರ್ ಉದ್ಗಟಾ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಆರೋಪಿ ಸೂರ್ಯಕಾಂತ್ ಸೇಥಿ "ತನ್ನ ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್ ಆಟಗಳನ್ನು ಆಡುವುದನ್ನು ವಿರೋಧಿಸಿದ್ದಕ್ಕಾಗಿ" ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ಕೋಪಗೊಂಡಿದ್ದ ಎಂದು ಜಗತ್ಸಿಂಗ್‌ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್‌ಚಾರ್ಜ್ ಪ್ರಭಾಸ್ ಸಾಹು ಹೇಳಿದ್ದಾರೆ.
ಮೃತರನ್ನು ಪ್ರಶಾಂತ್ ಸೇಥಿ ಅಲಿಯಾಸ್ ಕಾಲಿಯಾ (65), ಅವರ ಪತ್ನಿ ಕನಕಲತಾ (62) ಮತ್ತು ಮಗಳು ರೋಸಲಿನ್ (25) ಎಂದು ಗುರುತಿಸಲಾಗಿದೆ.
"ಘಟನೆಯ ನಂತರ, ಸೂರ್ಯಕಾಂತ್ ಸೇಥಿ ಗ್ರಾಮದ ಬಳಿ ತಲೆಮರೆಸಿಕೊಂಡಿದ್ದನು, ಮತ್ತು ನಂತರ ಅವನನ್ನು ಬಂಧಿಸಲಾಯಿತು" ಎಂದು ಎಸ್‌ಪಿ ಹೇಳಿದರು. ಯುವಕನಿಗೆ ಮಾನಸಿಕ ಸಮಸ್ಯೆ ಇದೆ ಎಂದು ಶಂಕಿಸಲಾಗಿದೆ ಎಂದು ಉದ್ಗಾಟ ಹೇಳಿದರು. ಸ್ಥಳೀಯ ಶಾಸಕ ಅಮರೇಂದ್ರ ದಾಸ್ ಅವರು, ಕುಟುಂಬ ಸದಸ್ಯರು ಒಮ್ಮೆ ಭೂ ವಿವಾದದ ಕುರಿತು ತಮ್ಮ ಬಳಿಗೆ ಬಂದಿದ್ದರು ಎಂದು ಹೇಳಿದರು. ಸೂರ್ಯಕಾಂತ್ ತನ್ನ ಹೆತ್ತವರನ್ನು ಕೊಂದಿದ್ದಾಗಿ ತಮ್ಮ ಬಳಿ ಒಪ್ಪಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.