ಹೈದರಾಬಾದ್: ತೆಲಂಗಾಣ ರಾಜ್ಯದ 26 ವರ್ಷದ ವಿದ್ಯಾರ್ಥಿಯೊಬ್ಬರು ಅಮೆರಿಕದಲ್ಲಿ ಗುಂಡೇಟಿನಿಂದ ಮೃತಪಟ್ಟಿದ್ದು, ಅವರ ಸಾವಿಗೆ ನಿಖರ ಕಾರಣ ಮತ್ತು ಸಂದರ್ಭ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ಜಿ. ಪ್ರವೀಣ್ ಎಂಬುವವರು ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು. ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಬೆಳಗ್ಗೆ ಅವರ ಕುಟುಂಬಕ್ಕೆ ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರವೀಣ್ ಅವರ ದೇಹಕ್ಕೆ ಗುಂಡುಗಳು ತಗುಲಿದೆ ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದಾರೆ ಎಂದು ಅವರ ಸೋದರಸಂಬಂಧಿ ಅರುಣ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಂಗಡಿಯೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಪ್ರವೀಣ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಕೆಲವರು ಹೇಳುತ್ತಾರೆ, ಆದರೆ ಸಾವಿಗೆ ನಿಖರ ಕಾರಣವೇನೆಂದು ಕುಟುಂಬ ಸದಸ್ಯರಿಗೆ ತಿಳಿದುಬಂದಿಲ್ಲ.
ನಿನ್ನೆ ಬುಧವಾರ ಮುಂಜಾನೆ ಪ್ರವೀಣ್ ತನ್ನ ತಂದೆಗೆ ಕರೆ ಮಾಡಿದ್ದ ವೇಳೆ ಅವರು ನಿದ್ರಿಸುತ್ತಿದ್ದ ಕಾರಣ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಘಟನೆಯ ಬಗ್ಗೆ ತಿಳಿದ ನಂತರ ಪ್ರವೀಣ್ ಅವರ ಪೋಷಕರು ಆಘಾತದ ಸ್ಥಿತಿಯಲ್ಲಿದ್ದಾರೆ ಎಂದು ಅರುಣ್ ಹೇಳಿದ್ದಾರೆ.
ಕುಟುಂಬವು ಹೈದರಾಬಾದ್‌ನ ನೆರೆಯ ರಂಗಾರೆಡ್ಡಿ ಜಿಲ್ಲೆಯವರು. ಶವಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯುತ್ತದೆ ಎಂದು ಅಮೆರಿಕದ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ಬಿ ಟೆಕ್ ಓದಿದ್ದ ಪ್ರವೀಣ್, 2023 ರಲ್ಲಿ ಎಂಎಸ್ ಮಾಡಲು ಅಮೆರಿಕಕ್ಕೆ ಹೋಗಿದ್ದರು. ಅವರು ಕಳೆದ ವರ್ಷ ಡಿಸೆಂಬರ್ ನಲ್ಲಿ ತೆಲಂಗಾಣಕ್ಕೆ ಬಂದು ಹೋಗಿದ್ದರು. ಕುಟುಂಬ ಸದಸ್ಯರು ಶಾಸಕರು ಮತ್ತು ಇತರ ರಾಜಕೀಯ ನಾಯಕರನ್ನು ಸಹಾಯಕ್ಕಾಗಿ ಯಾಚಿಸುತ್ತಿದ್ದಾರೆ.
ರಾಯಭಾರ ಕಚೇರಿ ಶೋಕ
ವಿದ್ಯಾರ್ಥಿ ಪ್ರವೀಣ್ ಕುಮಾರ್ ಅವರ ನಿಧನಕ್ಕೆ ಚಿಕಾಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ತೀವ್ರ ಶೋಕ ವ್ಯಕ್ತಪಡಿಸಿದೆ. ನಾವು ಅವರ ಕುಟುಂಬ ಮತ್ತು ವಿಶ್ವವಿದ್ಯಾಲಯದೊಂದಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸಂಪರ್ಕದಲ್ಲಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂತಾಪದಲ್ಲಿ ಭಾಗಿಯಾಗುತ್ತೇವೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ತೆಲಂಗಾಣದ ಕನಿಷ್ಠ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಇದೇ ರೀತಿ ಗುಂಡಿಕ್ಕಿ ಹತ್ಯೆಗೀಡಾಗಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಖಮ್ಮಂನ ಒಬ್ಬರು ಮತ್ತು ಈ ವರ್ಷದ ಜನವರಿಯಲ್ಲಿ ಹೈದರಾಬಾದ್‌ನ ಮತ್ತೊಬ್ಬರು ಅಮೆರಿಕದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದರು.