ಗುವಾಹಟಿ: ತಮಿಳುನಾಡು ಸರ್ಕಾರ ರಾಜ್ಯ ಬಜೆಟ್‌ಗಾಗಿ ಹೊಸ ರೂಪಾಯಿ ಲೋಗೋವನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ, ಭಾರತದ ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದ ಐಐಟಿ ಗುವಾಹಟಿ ಪ್ರಾಧ್ಯಾಪಕ ಡಿ. ಉದಯ ಕುಮಾರ್ ಅವರು ಗುರುವಾರ ಭಾಷೆಯ ವಿವಾದಕ್ಕೆ ಸಿಲುಕಲು ನಿರಾಕರಿಸಿದ್ದಾರೆ ಮತ್ತು ತಮ್ಮ ತಂದೆ ಡಿಎಂಕೆ ಮಾಜಿ ಶಾಸಕರಾಗಿರುವುದು ಕೇವಲ ಕಾಕತಾಳೀಯ ಎಂದು ಹೇಳಿದ್ದಾರೆ.
ದಕ್ಷಿಣ ರಾಜ್ಯದ ಡಿಎಂಕೆ ಸರ್ಕಾರವು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಿರುವ 2025-26ನೇ ಸಾಲಿನ ಬಜೆಟ್‌ಗಾಗಿ ತನ್ನ ಲೋಗೋದಲ್ಲಿ ಭಾರತದ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರದೊಂದಿಗೆ ಬದಲಾಯಿಸಿದೆ. ಈ ಕ್ರಮವು ಬಿಜೆಪಿಯ ಕೋಪಕ್ಕೆ ಕಾರಣವಾಗಿದೆ.
"ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಬದಲಾವಣೆಯ ಅಗತ್ಯವಿದೆ ಎಂದು ಇದ್ದಕ್ಕಿದ್ದಂತೆ ಸರ್ಕಾರ ತಮ್ಮದೇ ಆದ ಸ್ಕ್ರಿಪ್ಟ್ ಅನ್ನು ಕಾರ್ಯಗತಗೊಳಿಸಲು ತಿಳಿಸಿದರು. ಇದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು. ಆದ್ದರಿಂದ, ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಇದು ಸಂಪೂರ್ಣವಾಗಿ ಸರ್ಕಾರಕ್ಕೆ ಬಿಟ್ಟದ್ದು" ಎಂದು ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಕುಮಾರ್ ಅವರ ತಂದೆ ಎನ್ ಧರ್ಮಲಿಂಗಂ 1971 ರಲ್ಲಿ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷದಿಂದ ರಿಷಿವಂಡಿಯಂ ಕ್ಷೇತ್ರದಿಂದ ಶಾಸಕರಾಗಿದ್ದರು.
"ನನ್ನ ತಂದೆ ನಾನು ಹುಟ್ಟುವ ಮೊದಲೇ ಶಾಸಕರಾಗಿದ್ದರು. ಈಗ ಅವರಿಗೆ ವಯಸ್ಸಾಗಿದೆ ಮತ್ತು ನಮ್ಮ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಶಾಂತಿಯುತವಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇದು ಕಾಕತಾಳೀಯವಾಗಿದೆ" ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.