ನವದೆಹಲಿ: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಶೇ. 4 ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಭಾರತೀಯ ಜನತಾ ಪಕ್ಷ ಶನಿವಾರ ವಿರೋಧಿಸಿದ್ದು, ಇದು ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕೀಯ ಮತ್ತು ಈ ನಿರ್ಧಾರ ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಆರೋಪಿಸಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿಯೆಟ್ನಾಂ ಬಗ್ಗೆ ಹೊಂದಿರುವ 'ಅಸಾಧಾರಣ ಪ್ರೀತಿ'ಯನ್ನು ವಿವರಿಸಬೇಕು. ಲೋಕಸಭೆಯ ವಿರೋಧ ಪಕ್ಷದ ನಾಯಕ ತಮ್ಮ ಕ್ಷೇತ್ರಕ್ಕಿಂತ ಹೆಚ್ಚು ಆ ದೇಶದಲ್ಲೇ ಸಮಯ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೊಸ ವರ್ಷದ ಸಮಯದಲ್ಲಿ ವಿಯೆಟ್ನಾಂಗೆ ತೆರಳಿದ್ದ ರಾಹುಲ್ ಗಾಂಧಿ, ಇದೀಗ ಹೋಳಿ ಸಮಯದಲ್ಲಿ ವಿಯೆಟ್ನಾಂನಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
"ಆ ದೇಶಕ್ಕೆ ರಾಹುಲ್ ಗಾಂಧಿಯ ಭೇಟಿಯು ತುಂಬಾ ಕುತೂಹಲಕಾರಿಯಾಗಿದೆ" ಎಂದು ಪ್ರಸಾದ್ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ, ಗುತ್ತಿಯಲ್ಲಿ ಮುಸ್ಲಿಂಮರಿಗೆ ಮೀಸಲಾತಿ ನೀಡಿರುವ ನಿರ್ಧಾರದ ಹಿಂದೆ ಅವರ ಕೈವಾಡವಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಈ ನಿರ್ಧಾರವು ಚಿಕ್ಕದಾಗಿ ಕಾಣಿಸಬಹುದು. ಆದರೆ ಇಂತಹ ಬೆಳವಣಿಗೆಗಳು ರಾಷ್ಟ್ರೀಯವಾಗಿ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಕಾಂಗ್ರೆಸ್ ನ ಈ ತುಷ್ಟೀಕರಣ ರಾಜಕೀಯಕ್ಕೆ ಯಾವುದೇ ಮಿತಿ ಇಲ್ಲ. ಮುಂದೆ ಸಿನಿಮಾ ಮತ್ತು ರೈಲು ಟಿಕೆಟ್‌ಗಳನ್ನು ಖರೀದಿಸಲು ಮುಸ್ಲಿಮರಿಗೆ ಪ್ರತ್ಯೇಕ ಸರತಿ ಸಾಲುಗಳು ಬಂದರೂ ಆಶ್ಚರ್ಯ ಇಲ್ಲ ಎಂದಿದ್ದಾರೆ.