ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಗಡಿ ಜಿಲ್ಲೆ ಹಂದ್ವಾರದ ಜಚಲ್ದಾರಾದ ಕ್ರುಂಭೂರಾ ಪ್ರದೇಶದಲ್ಲಿ ಉಗ್ರರು ಮತ್ತು ಭಾರತೀಯ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರನನ್ನು ಸೇನಾಪಡೆ ಸದೆಬಡಿದಿದೆ.
ಜಚಲ್ದಾರ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು.
ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಭದ್ರತಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಬಳಿಕ ಶೋಧ ಕಾರ್ಯಾಚರಣೆನ್ನು ಎನ್ಕೌಂಟರ್ ಆಗಿ ಬದಲಿಸಿದ ಭದ್ರತಾ ಪಡೆಗಳು, ಸ್ಥಳ ಸುತ್ತುವರೆದು ಪ್ರತಿದಾಳಿ ನಡೆಸಿ, ದಿಟ್ಟ ಉತ್ತರ ನೀಡಿತು.
ಕಾರ್ಯಾಚರಣೆಯಲ್ಲಿ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳದಲ್ಲಿ ಇನ್ನೂ 2-3 ಉಗ್ರರು ಅಡಗಿ ಕುಳಿತಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.