ಜೈಪುರ: ಮೀರತ್ ನಲ್ಲಿ ಲವರ್ ಜೊತೆ ಸೇರಿ ಪತ್ನಿಯೇ ತನ್ನ ಗಂಡನನ್ನು ಕೊಂದ ಮೀರತ್ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಜೈಪುರದಲ್ಲೂ ಅಂತಹುದೇ ಘಟನೆ ವರದಿಯಾಗಿದ್ದು, ಆರೋಪಿಗಳು ಹಾಡಹಗಲೇ ಶವವನ್ನು ಮೂಟೆಕಟ್ಟಿ ಬೈಕ್ ನಲ್ಲಿ ಸಾಗಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ದಕ್ಷಿಣ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗಿದ್ದರೂ ತನ್ನ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಪ್ರಿಯಕರನ ನೆರವಿನಿಂದ ಗಂಡನನ್ನು ಕೊಂದು ಹಾಕಿದ್ದಾಳೆ. ಮಾತ್ರವಲ್ಲದೇ ಶವವನ್ನು ಲವರ್ ಬೈಕ್ ಮೇಲೆ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿರುವ ಧಾರುಣ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ಮತ್ತು ಆಕೆಯ ಪ್ರಿಯಕರ ವಿವಾಹೇತರ ಸಂಬಂಧದ ಬಗ್ಗೆ ಪತಿ ಪ್ರಶ್ನಿಸಿದಾಗ ಆಕೆ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಶವವನ್ನು ಮೂಟೆ ಕಟ್ಟಿ ಲವರ್ ನ ಬೈಕ್ ಮೇಲೆ ಹೇರಿಕೊಂಡು ಇಬ್ಬರೂ ಹೋಗಿ ಸಮೀಪದ ಕಾಡಿನಲ್ಲಿ ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗಿದೆ.
ಏನಿದು ಘಟನೆ?
ದಕ್ಷಿಣ ಜೈಪುರದ ನಿವಾಸಿ ಧನ್ನಲಾಲ್ ಸೈನಿ ಅವರ ಪತ್ನಿ ಗೋಪಾಲಿ ದೇವಿ ಐದು ವರ್ಷಗಳಿಂದ ಸ್ಥಳೀಯ ನಿವಾಸಿ ದೀನದಯಾಳ್ ಕುಶ್ವಾಹ ಅವರೊಂದಿಗೆ ಅಕ್ರಮ ದೈಹಿಕ ಸಂಬಂಧ ಹೊಂದಿದ್ದರು. ವೃತ್ತಿಯಲ್ಲಿ ತರಕಾರಿ ಮಾರಾಟಗಾರನಾಗಿದ್ದ ಧನ್ನಲಾಲ್ ಸೈನಿ ವ್ಯಾಪಾರಕ್ಕೆಂದು ಹೊರಗೆ ಹೋದಾಗ ಪತ್ನಿ ಗೋಪಾಲಿ ದೇವಿ ತನ್ನ ಪ್ರಿಯಕರನನ್ನು ಕರೆಸಿಕೊಂಡು ಸಮಯ ಕಳೆಯುತ್ತಿದ್ದಳು. ಇದನ್ನು ಗಮನಿಸಿದ್ದ ಸ್ಥಳೀಯರು ಪತಿಗೆ ಮಾಹಿತಿ ನೀಡಿದ್ದರು.
ಈ ವೇಳೆ ಒಂದು ದಿನ ಮನೆಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರ ದೀನದಯಾಳ್ ಕುಶ್ವಾಹ ಇರುವ ಮಾಹಿತಿ ಪಡೆದ ಪತಿ ಧನ್ನಲಾಲ್ ಸೈನಿ ಮನೆಗೆ ಬಂದು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ. ಆದರೆ ಗೋಪಾಲಿ ದೇವಿ ಮಾತ್ರ ದೀನದಯಾಳ್ ಕುಶ್ವಾಹ ವೃತ್ತಿಯಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ವಿಚಾರವಾಗಿ ಮಾತನಾಡಲು ಮನೆಗೆ ಬಂದಿದ್ದರು ಎಂದು ಸುಳ್ಳು ಹೇಳಿದ್ದಾರೆ. ಆದರೆ ಪ್ರಿಯಕರ ಕುಶ್ವಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಬಳಿಕ ಆಕೆಯ ಮಾತಿನಿಂದ ಸಮಾಧಾನಗೊಳ್ಳದ ಪತಿ ಕಳೆದ ಶನಿವಾರ ಆಕೆ ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಗೆ ಹಿಂಬಾಲಿಸಿ ಆಕೆ ಯಾವ ರೀತಿಯ ಕೆಲಸ ಮಾಡುತ್ತಿದ್ದಾಳೆಂದು ವಿಚಾರಿಸಲು ಹೋಗಿದ್ದಾರೆ.
ಈ ವೇಳೆ ಅಂಗಡಿಯಲ್ಲಿ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರ ಅಸಭ್ಯ ಭಂಗಿಯಲ್ಲಿರುವುದನ್ನು ನೋಡಿದ್ದಾನೆ. ಪತ್ನಿ ಮೇಲೆ ಧನ್ನಲಾಲ್ ಸೈನಿ ಆಕ್ರೋಶ ಹೊರಹಾಕಿ ಜಗಳ ತೆಗೆದಿದ್ದಾನೆ. ಕೂಡಲೇ ಆರೋಪಿಗಳು ಧನ್ನಲಾಲ್ ಸೈನಿಯನ್ನು ಅದೇ ಕಟ್ಟಡದ ಮಹಡಿಯಲ್ಲಿರುವ ಮತ್ತೊಂದು ಅಂಗಡಿಗೆ ಕರೆದೊಯ್ದು, ಸಮಾಧಾನ ಮಾಡಲು ಯತ್ನಿಸಿದ್ದಾರೆ. ಆದರೆ ಧನ್ನಲಾಲ್ ಸಮ್ಮನಾಗದ ಕಾರಣ ಆರೋಪಿ ದೀನದಯಾಳ್ ಕುಶ್ವಾಹ್ ಅಲ್ಲೇ ಇದ್ದ ಕಬ್ಬಿಣದ ಪೈಪ್‌ನಿಂದ ಅವನ ತಲೆಗೆ ಹೊಡೆದು ಹಗ್ಗದಿಂದ ಕತ್ತು ಹಿಸುಕಿ ಕೊಂದು ಹಾಕಿದ್ದಾರೆ ಎಂದು ಜೈಪುರದ ದಕ್ಷಿಣ ಉಪ ಪೊಲೀಸ್ ಆಯುಕ್ತ (ಡಿಸಿಪಿ) ದಿಗಂತ್ ಆನಂದ್ ಹೇಳಿದ್ದಾರೆ.
ಬಳಿಕ ದೇಹವನ್ನು ಒಂದು ಚೀಲದಲ್ಲಿ ಹಾಕಿಕೊಂಡು ಕುಶ್ವಾಹ್ ಬೈಕ್ ನಲ್ಲೇ ಇಬ್ಬರೂ ಹೋಗಿ ಸಮೀಪದ ಕಾಡಿನಲ್ಲಿ ಸುಟ್ಟು ಹಾಕಿ ಬಂದಿದ್ದಾರೆ. ಇಬ್ಬರೂ ದೇಹವಿದ್ದ ಚೀಲದೊಂದಿಗೆ ಬೈಕ್ ನಲ್ಲಿ ಹೋಗುತ್ತಿರುವುದು ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಕಾಡಿನಲ್ಲೊಂದು ಶವ ಪತ್ತೆಯಾಗಿದ್ದು ಇದರ ತನಿಖೆ ನಡೆಸಿದಾಗ ಅದು ಗೋಪಾಲಿ ದೇವಿಯ ಪತಿ ಧನ್ನಲಾಲ್ ಸೈನಿಯದ್ದು ಎಂದು ತಿಳಿದುಬಂದಿದೆ.
ಬಳಿಕ ಪೊಲೀಸರು ಆರೋಪಿ ಮಹಿಳೆ ಸೇರಿದಂತೆ ವಶಕ್ಕೆ ಪಡೆದು ತೀವ್ರ ತನಿಖೆ ನಡೆಸಿದಾಗ ಆಕೆ ಸತ್ಯಾಂಶ ಬಾಯಿಬಿಟ್ಟಿದ್ದಾರೆ.