ಮುಂಬೈ: ಮಹಾರಾಷ್ಟ್ರ ಗಲಭೆ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು ನಾಗ್ಪುರ ಹಿಂಸಾಚಾರಕ್ಕೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರವೇ ಕಾರಣ ಎಂಬ ಆರೋಪಗಳ ಬೆನ್ನಲ್ಲೇ ಅತ್ತ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖವಾಣಿ ಸಾಮ್ನಾ ಚಿತ್ರದ ಬೆನ್ನಿಗೆ ನಿಂತಿದೆ.
ಮಹಾರಾಷ್ಟ್ರದ ನಾಗ್ಪುರ ಸೇರಿದಂತೆ ವಿವಿಧೆಡೆ ವ್ಯಾಪಕ ಹಿಂಸಾಚಾರ ಮತ್ತು ಗಲಭೆ ಸಂಭವಿಸಿತ್ತು. ಮಹಾರಾಷ್ಟ್ರದಲ್ಲಿರುವ ಔರಂಗಜೇಬ್ ಸಮಾಧಿಯನ್ನು ಕೆಡವಿಹಾಕುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಎರಡೂ ಕೋಮಿನ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು.
ಈ ಹಿಂಸಾಚಾರಕ್ಕೆ ಹಿಂದಿಯ ಛಾವಾ ಚಿತ್ರವೇ ಕಾರಣ ಎಂದು ಬರೇಲ್ವಿ ಪಂಥದ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಆರೋಪಿಸಿದ್ದಾರೆ. ಮಾತ್ರವಲ್ಲದೇ ಅವರು ಹಿಂದಿಯ 'ಛಾವಾ' ಚಿತ್ರವನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಇದು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ ಮತ್ತು ಮಹಾರಾಷ್ಟ್ರ ಹಿಂಸಾಚಾರಕ್ಕೆ ಈ ಚಿತ್ರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕೂಡ, ಛಾವಾ ಚಿತ್ರವು ಮರಾಠಾ ರಾಜನ ನಿಜವಾದ ಕಥೆಯನ್ನು ಪ್ರಸ್ತುತಪಡಿಸುತ್ತದೆ. ಅದನ್ನು ನೋಡಿದ ನಂತರ ಜನರು ಔರಂಗಜೇಬನ ಬಗ್ಗೆ ತಮ್ಮ ಕೋಪವನ್ನು ದೊಡ್ಡ ಪ್ರಮಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದರು.
Chhaava ಸಿನಿಮಾ ಬೆನ್ನಿಗೆ ನಿಂತ SAAMNA
ಇದೀಗ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರೆದಿದೆ. 'ನಾಗಪುರ ಹಿಂಸಾಚಾರಕ್ಕೆ "ಛಾವಾ" ಚಿತ್ರವನ್ನು ಸಿಎಂ ಫಡ್ನವೀಸ್ 'ದೂಷಿಸುವುದು' ಅವರ "ದುರ್ಬಲ ನೈತಿಕತೆಯ" ಸಂಕೇತವಾಗಿದೆ. ರಾಜ್ಯದ ಎರಡನೇ ರಾಜಧಾನಿ ನಾಗ್ಪುರದಲ್ಲಿ ಸೋಮವಾರ ನಡೆದ ಗಲಭೆ ಪ್ರಕರಣದ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಬಿಜೆಪಿ ನೇತೃತ್ವದ ಸರ್ಕಾರ ಯೋಜಿಸುತ್ತಿದೆಯೇ ಎಂದು ಪ್ರಶ್ನಿಸಿದೆ.
ಇದೇ ವೇಳೆ ದಿವಂಗತ ಆರ್‌ಎಸ್‌ಎಸ್ ಮುಖ್ಯಸ್ಥ ಎಂ ಎಸ್ ಗೋಲ್ವಾಲ್ಕರ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಸಂಭಾಜಿ ಮಹಾರಾಜರ ಬಗ್ಗೆ ಹೊಗಳಿಕೆಯಿಲ್ಲದ ಪದಗಳಲ್ಲಿ ಬರೆದಿದ್ದಾರೆ. ಅವರ ಬರಹಗಳೇ ಗಲಭೆಗಳನ್ನು ಪ್ರಚೋದಿಸಿಲ್ಲ. ಹೀಗಿರುವಾಗ ಜನರು ಚಲನಚಿತ್ರವನ್ನು ನೋಡಿದ ನಂತರ ಹಿಂಸಾಚಾರವನ್ನು ಏಕೆ ಆಶ್ರಯಿಸಬೇಕು ಎಂದು ಅದು ಕೇಳಿದೆ.
ಮಮತಾ ಬ್ಯಾನರ್ಜಿ ಟೀಕೆ
ಇನ್ನು ಇದೇ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಟೀಕೆ ಮಾಡಿದ್ದು, 'ಭಾರತವು ವೈವಿಧ್ಯತೆಯಲ್ಲಿ ಏಕತೆಗೆ ಹೆಸರುವಾಸಿಯಾಗಿದೆ. ಬಾಬರಿ ಮಸೀದಿ ಧ್ವಂಸದ ನಂತರ, ನಾನು ಕೋಮು ಸಾಮರಸ್ಯವನ್ನು ರಕ್ಷಿಸಲು ಬೀದಿಗಿಳಿದಿದ್ದೇನೆ. ಪರಿಸ್ಥಿತಿಯ ಬಗ್ಗೆ ತಮ್ಮ INDIA ಮೈತ್ರಿಕೂಟದ ಪಾಲುದಾರ ಪಕ್ಷ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.