ಪಾಟ್ನಾ: ನಗರದಲ್ಲಿ ಗುರುವಾರ ನಡೆದ ಕ್ರೀಡಾಕೂಟವೊಂದರಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕಮಾರ್ ನಗುತ್ತಾ ಅಗೌರವ ತೋರಿರುವ ದೃಶ್ಯ ತುಣುಕುಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಬೆನ್ನಲ್ಲೇ ವಿರೋಧ ಪಕ್ಷಗಳು ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿವೆ.
ನಿತೀಶ್ ಸರ್ಕಾರದಲ್ಲಿ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ರಾಜ್ಯ ಮತ್ತು ರಾಷ್ಟ್ರಕ್ಕೆ ಮಾಡಿದ ಅವಮಾನ, ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿರವಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ನೀವು ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿ ಎಂದು ನಾವು ನಿಮಗೆ ನೆನಪಿಸಬೇಕಾಗಿದೆ. ನೀವು ಕೆಲವು ಸೆಕೆಂಡುಗಳ ಕಾಲ ನಿಂತುಕೊಳ್ಳುವಷ್ಟು ದೈಹಿಕವಾಗಿ ಅಥವಾ ಮಾನಸಿಕವಾಗಿ ಸ್ಥಿರವಾಗಿಲ್ಲ. ಅಂತಹ ರಾಜ್ಯದಲ್ಲಿ ನೀವು ಈ ಸ್ಥಾನದಲ್ಲಿ ಮುಂದುವರಿಯುವುದು ರಾಜ್ಯಕ್ಕೆ ಗಂಭೀರ ಕಳವಳಕಾರಿ ವಿಷಯವಾಗಿದೆ. ಬಿಹಾರವನ್ನು ಪದೇ ಪದೇ ಈ ರೀತಿ ಅವಮಾನಿಸಬೇಡಿ ಎಂದು ತೇಜಸ್ವಿ ತಿಳಿಸಿದ್ದಾರೆ.
ಈ ವಿಡಿಯೋವನ್ನು ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಕೂಡ ಹಂಚಿಕೊಂಡಿದ್ದಾರೆ. "ರಾಷ್ಟ್ರಗೀತೆಯ ಅವಮಾನವನ್ನು ಭಾರತ ಸಹಿಸುವುದಿಲ್ಲ" ಎಂದು ಲಾಲು ಬರೆದು ಕೊಂಡಿದ್ದಾರೆ.
ಪಾಟ್ನಾದ ಪಾಟಲೀಪುತ್ರ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ಸೆಪಕ್ಟಕ್ರಾ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ವೇಳೆ ನಿತೀಶ್ ಕುಮಾರ್ ಅವರು ವೇದಿಕೆಯಲ್ಲೇ ಇದ್ದಐಎಎಸ್ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಜತೆ ನಗುತ್ತಾ ಮತನಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಧಿಕಾರಿಯ ಗಮನ ಸೆಳೆಯಲು ಮೈ ಮುಟ್ಟುತ್ತಿರುವುದು ಕಾಣಿಸುತ್ತಿದೆ. ಒಂದು ಹಂತದಲ್ಲಿ ಸಭೆಯಲ್ಲಿದ್ದ ಪ್ರೇಕ್ಷಕರತ್ತ ನಕ್ಕು ಕೈಮುಗಿದು ನಮಸ್ಕರಿಸುತ್ತಿದ್ದಾರೆ. ದೀಪಕ್ ಕುಮಾರ್ ಅವರು ಮುಖ್ಯಮಂತ್ರಿಗಳೊಂದಿಗೆ ನಿಶ್ಶಬ್ದವಾಗಿ ಇರುವಂತೆ ಸನ್ನೆ ಮಾಡುತ್ತಿದ್ದಾರೆ.