ಮುಂಬೈ: ವಿವಾದಾತ್ಮಕ ಹೇಳಿಕೆ ನೀಡಿದ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುತ್ತಿದ್ದ ಸ್ಟುಡಿಯೋವನ್ನು ಧ್ವಂಸ ಮಾಡಿದ ಶಿವಸೇನಾ ಕಾರ್ಯಕರ್ತರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಷ್ಟವನ್ನು ವಸೂಲಿ ಮಾಡಬೇಕು ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಸೋಮವಾರ ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ರಾಜ್ಯ ರಾಜಧಾನಿಯಲ್ಲಿ "ಗುಂಡಾ ರಾಜ್" (ಗೂಂಡಾಗಿರಿ) ಇದೆ ಎಂದು ಆರೋಪಿಸಿದರು ಮತ್ತು ಫಡ್ನವೀಸ್ ಗೃಹ ಇಲಾಖೆಯನ್ನು ನಿರ್ವಹಿಸಲು ಅಸಮರ್ಥ ಎಂದು ಟೀಕಿಸಿದರು.
ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಮುಂಬೈನ ಖಾರ್ ಪ್ರದೇಶದಲ್ಲಿ ಕಾರ್ಮಾ ಅವರ ಕಾರ್ಯಕ್ರಮವನ್ನು ಚಿಕ್ರೀಕರಿಸಲಾಗುತ್ತಿದ್ದ ಹ್ಯಾಬಿಟಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಪೊಲೀಸರು ಸುಮಾರು 40 ಶಿವಸೇನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಾಮ್ರಾ ಅವರು ಶಿಂಧೆ ಅವರನ್ನು "ಗದ್ದಾರ್"(ದೇಶದ್ರೋಹಿ) ಎಂದು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಮ್ರಾ ಅವರು ತಮ್ಮ ವಿಡಂಬನಾತ್ಮಕ ಹಾಡಿನಲ್ಲಿ ಯಾರ ಹೆಸರನ್ನು ಬಳಸಿಲ್ಲ. ಆದರೂ ಅವರ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುತ್ತಿದ್ದ ಸ್ಟುಡಿಯೋಗೆ ನುಗ್ಗಿ ಧ್ವಂಸಗೊಳಿಸುವ ಅಗತ್ಯ ಏನಿತ್ತು? ಎಂದು ರಾವತ್ ಪ್ರಶ್ನಿಸಿದ್ದಾರೆ.
"ಈ ಬೆಳವಣಿಗೆ ಫಡ್ನವೀಸ್ ಗೃಹ ಇಲಾಖೆಯನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ಅವರು ಹೇಳಿದ್ದಾರೆ.
ನಾಗ್ಪುರ ಹಿಂಸಾಚಾರದಲ್ಲಿ ಉಂಟಾದ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಭಾನುವಾರ ರಾತ್ರಿ ನಡೆದ ವಿಧ್ವಂಸಕ ಕೃತ್ಯಕ್ಕೂ ಅವರು ಅದೇ ಮಾನದಂಡವನ್ನು ಅನ್ವಯಿಸಬೇಕು ಎಂದು ರೌತ್ ಆಗ್ರಹಿಸಿದರು.