ತಿರುವನಂತಪುರಂ: ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.
ಇಂದು ತಿರುವನಂತಪುರಂನಲ್ಲಿ ನಡೆದ ಬಿಜೆಪಿಯ ರಾಜ್ಯ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಕೇಂದ್ರ ವೀಕ್ಷಕ ಪ್ರಹ್ಲಾದ್ ಜೋಶಿ ಅವರು ರಾಜೀವ್ ಚಂದ್ರಶೇಖರ್ ಆಯ್ಕೆಯನ್ನು ಘೋಷಿಸಿದರು.
ಕೇರಳ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ಚಂದ್ರಶೇಖರ್ ಅವರೊಬ್ಬರೇ ಭಾನುವಾರ ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದರು.
ನೂತನ ರಾಜ್ಯಾಧ್ಯಕ್ಷರ ಘೋಷಣೆಯ ಸಮಯದಲ್ಲಿ, ನಿರ್ಗಮಿತ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತು ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರಮುಖ ರಾಜ್ಯ ನಾಯಕರು ಉಪಸ್ಥಿತರಿದ್ದರು.
ಸುರೇಂದ್ರನ್ ಅವರು ವೇದಿಕೆಯಲ್ಲಿ ಚಂದ್ರಶೇಖರ್ ಅವರಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೇರಳ ಬಿಜೆಪಿ ಹೊಸ ಎತ್ತರಕ್ಕೆ ಬೆಳೆಯಲಿದೆ. ಕೇರಳದಲ್ಲಿ ಬಿಜೆಪಿಗೆ ಶೇ.19ಷ್ಟು ಮತ ಹಂಚಿಕೆಯಾಗಿದ್ದು, ಭವಿಷ್ಯದಲ್ಲಿ ರಾಜೀವ್ ಅವರ ನಾಯಕತ್ವದಲ್ಲಿ ಬಿಜೆಪಿ ಇಲ್ಲಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.