ನವದೆಹಲಿ: ಪಹಲ್ಗಾಮ್ ಉಗ್ರದಾಳಿ ಬಳಿಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿದ್ದ ಸೇನಾ ಸಂಘರ್ಷ ಕದನ ವಿರಾಮ ಘೋಷಣೆಯೊಂದಿಗೆ ಮೆತ್ತಗಾಗಿದೆ ಎನ್ನುವಾಗಲೇ ಭಾರತೀಯ ವಾಯುಸೇನೆ Operation Sindoor ಕುರಿತು ಮಹತ್ವದ ಹೇಳಿಕೆ ನೀಡಿದೆ.
ಹೌದು.. ಉಗ್ರಗಾಮಿಗಳ ವಿರುದ್ಧ ಭಾರತೀಯ ಸೇನೆ ಆರಂಭಿಸಿದ್ದ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರPahalgam terror attackಣೆ ಮುಗಿದಿಲ್ಲ. ಅದು ಇನ್ನೂ ಮುಂದುವರೆದಿದೆ ಎಂದು ಭಾರತೀಯ ವಾಯುಪಡೆ ಭಾನುವಾರ ಮಹತ್ವದ ಹೇಳಿಕೆ ನೀಡಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಉದ್ದೇಶಪೂರ್ವಕ ಮತ್ತು ವಿವೇಚನಾಯುಕ್ತ ರೀತಿಯಲ್ಲಿ ನಡೆಸಲಾಗಿದೆ ಎಂದು ಭಾರತೀಯ ವಾಯುಸೇನೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಭಾರತದ ವಾಯುಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಮತ್ತು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅವರೊಂದಿಗೆ ಉನ್ನತ ಮಟ್ಟದ ಸಭೆಯ ನಂತರ ಭಾರತೀಯ ವಾಯುಪಡೆಯಿಂದ ಈ ಹೇಳಿಕೆ ಬಂದಿದೆ.
ಯಶಸ್ವಿಯಾಗಿ ಗುರಿ ತಲುಪಿದ್ದೇವೆ: IAF
ಇನ್ನು ಭಾರತೀಯ ವಾಯುಪಡೆ (ಐಎಎಫ್) ಆಪರೇಷನ್ ಸಿಂಧೂರ್‌ನಲ್ಲಿ ತನಗೆ ನಿಯೋಜಿಸಲಾದ ಕಾರ್ಯಗಳನ್ನು ನಿಖರತೆ ಮತ್ತು ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಾರ್ಯಾಚರಣೆಗಳನ್ನು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಉದ್ದೇಶಪೂರ್ವಕ ಮತ್ತು ವಿವೇಚನಾಯುಕ್ತ ರೀತಿಯಲ್ಲಿ ನಡೆಸಲಾಯಿತು ಎಂದು ಹೇಳಿದೆ.
ಕಾರ್ಯಾಚರಣೆ ಪ್ರಗತಿಯಲ್ಲಿದೆ
ಇದೇ ವೇಳೆ ಭಾರತೀಯ ಸೇನೆ ಆರಂಭಿಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಇನ್ನೂ ನಡೆಯುತ್ತಿರುವುದರಿಂದ, ಸರಿಯಾದ ಸಮಯದಲ್ಲಿ ವಿವರವಾದ ಬ್ರೀಫಿಂಗ್ ಅನ್ನು ನಡೆಸಲಾಗುವುದು. ಪರಿಶೀಲಿಸದ ಮಾಹಿತಿಯ ಊಹಾಪೋಹ ಮತ್ತು ಪ್ರಸರಣದಿಂದ ದೂರವಿರಲು ಐಎಎಫ್ ಎಲ್ಲರನ್ನೂ ಒತ್ತಾಯಿಸುತ್ತದೆ" ಎಂದು ಅದು ಹೇಳಿದೆ.