ಚೆನ್ನೈ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪೊಲ್ಲಾಚಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ 9 ಮಂದಿಯೂ ತಪ್ಪಿತಸ್ಥರು ಎಂದು ಕೊಯಮತ್ತೂರು ಮಹಿಳಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
2019 ರಲ್ಲಿ ತಮಿಳುನಾಡನ್ನು ಬೆಚ್ಚಿಬೀಳಿಸಿದ್ದ ಪೊಲ್ಲಾಚಿ ಲೈಂಗಿಕ ಪ್ರಕರಣದ ಎಲ್ಲಾ 9 ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ. ಕೊಯಮತ್ತೂರು ಜಿಲ್ಲಾ ಮಹಿಳಾ ನ್ಯಾಯಾಲಯದ ನ್ಯಾಯಾಧೀಶೆ ನಂದಿನಿ ದೇವಿ ಅವರು ಈ ಮಹತ್ವದ ತೀರ್ಪು ನೀಡಿದರು.
ತೀರ್ಪು ಘೋಷಣೆ ವೇಳೆ ಸರ್ಕಾರಿ ಪರ ವಕೀಲರು ಎಲ್ಲಾ 9 ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದೆ ಎಂದು ನ್ಯಾಯಾಧೀಶರು ಹೇಳಿದರು.
ಶಬರಿರಾಜನ್ ಅಲಿಯಾಸ್ ರಿಶ್ವಂತ್, 32, ತಿರುನಾವುಕರಸು, 34, ಟಿ ವಸಂತ ಕುಮಾರ್, 30, ಎಂ ಸತೀಶ್, 33, ಆರ್.ಮಣಿ ಅಲಿಯಾಸ್ ಮಣಿವಣ್ಣನ್, ಪಿ ಬಾಬು, 33, ಹರೋನ್ ಪಾಲ್, 32, ಅರುಳಾನಂದಮ್, 39, ಮತ್ತು ಅರುಣ್ ಕುಮಾರ್, 33 ಶಿಕ್ಷೆಗೊಳಗಾದವರಾಗಿದ್ದಾರೆ.
AIADMK ಆಡಳಿತದಲ್ಲಿ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣ
ಕಳೆದ AIADMK ಆಡಳಿತದಲ್ಲಿ ಬೆಳಕಿಗೆ ಬಂದ ಈ ಲೈಂಗಿಕ ಪ್ರಕರಣದಿಂದಾಗಿ, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದವು. ಈ ಲೈಂಗಿಕ ಪ್ರಕರಣದ ಆರೋಪಿಗಳು AIADMK ಪಕ್ಷದ ಹಿನ್ನೆಲೆ ಹೊಂದಿದ್ದಾರೆ ಎಂದು DMK ನಿರಂತರವಾಗಿ ಆರೋಪಿಸುತ್ತಿತ್ತು. ಆದಾಗ್ಯೂ, AIADMK ಅದನ್ನು ನಿರಾಕರಿಸಿತ್ತು.
ಸರ್ಕಾರಿ ವಕೀಲರ ವಾದ ಏನು?
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಸುಂದರಮೋಹನ್, "ಬಂಧಿತರಾದ ಎಲ್ಲಾ 9 ಜನರು ತಪ್ಪಿತಸ್ಥರೆಂದು ಕಂಡುಬಂದಿದೆ. ವಯಸ್ಸಿನ ಆಧಾರದ ಮೇಲೆ ಆರೋಪಿಗಳು ಕಡಿಮೆ ಶಿಕ್ಷೆಯನ್ನು ಕೋರಿದ್ದಾರೆ. ಆದರೆ ಸರ್ಕಾರ ಬಲವಾದ ವಾದ ಮಂಡಿಸಿದೆ. ಇದು ಅಪರೂಪದ ಪ್ರಕರಣ. ಮಹಿಳೆಯರನ್ನು ಒಳಗೊಂಡ ಈ ಪ್ರಕರಣದಲ್ಲಿ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ನೀಡಬೇಕು" ಎಂದು ಹೇಳಿದರು.
ಈ ಪ್ರಕರಣದಲ್ಲಿ, ಭಾರತೀಯ ದಂಡ ಸಂಹಿತೆಯ ಎರಡು ಪ್ರಮುಖ ವಿಭಾಗಗಳಾದ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 276 (2) (ಎನ್) (ಪದೇ ಪದೇ ಲೈಂಗಿಕ ಅಪರಾಧ ಎಸಗುವುದು) ಅಡಿಯಲ್ಲಿ ಅವರನ್ನು ತಪ್ಪಿತಸ್ಥರೆಂದು ಸಾಬೀತುಪಡಿಸಲಾಗಿದೆ ಎಂದು ಅವರು ಹೇಳಿದರು.
ಅಂತೆಯೇ "ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ಮಹಿಳೆಯರಿಗೆ ಪರಿಹಾರ ನೀಡಬೇಕು" ಎಂದು ಸುಂದರಮೋಹನ್ ಹೇಳಿದರು.