ನವದೆಹಲಿ: ಮುಂದಿನ 30 ದಿನಗಳಲ್ಲಿ ಅಕ್ರಮ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆಗಳನ್ನು (STF) ರಚಿಸುವಂತೆ ಕೇಂದ್ರ ಗೃಹ ಸಚಿವಾಲಯ (MHA) ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ಸೂಚನೆ ನೀಡಿದೆ.
ಏಪ್ರಿಲ್ 22 ರ ಪಹಲ್ಗಾಮ್‌ನಲ್ಲಿ 26 ಜೀವಗಳನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ನಿರ್ದೇಶವನ್ನು ಹೊರಡಿಸಲಾಗಿದ್ದು, ಕೇಂದ್ರ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಕಾರ್ಯಾಚರಣೆಯನ್ನು ನಡೆಸಲು ರಾಜ್ಯ ಸರ್ಕಾರಗಳಿಗೆ ಮುಕ್ತ ಹಸ್ತವನ್ನು ನೀಡಲಾಗಿದೆ.
ರಾಜ್ಯ ಸರ್ಕಾರಗಳು ರಚಿಸಿದ ಈ ವಿಶೇಷ ಕಾರ್ಯಪಡೆಗಳು ಅಕ್ರಮ ವಲಸಿಗರ ಸಮಗ್ರ ವಿವರಗಳನ್ನು ಸಂಗ್ರಹಿಸಬೇಕು. ವಲಸಿಗರ ಹೆಸರು, ಪೋಷಕರು, ವಿಳಾಸ, ಸಂಬಂಧಿಕರು ಸೇರಿದಂತೆ ಇತರ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬೇಕು.
ಅಕ್ರಮ ವಲಸಿಗರೆಂದು ದೃಢಪಟ್ಟ ನಂತರ, ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ದಾಖಲಿಸಿ ವಿದೇಶಿಯರ ಗುರುತಿನ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಸಚಿವಾಲಯ ತಿಳಿಸಿದೆ.
30 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅಕ್ರಮ ವಲಸಿಗರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಅಸ್ಸಾಂ ರೈಫಲ್ಸ್ ಅಥವಾ ಭಾರತೀಯ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಲಾಗುತ್ತದೆ. ನಂತರ ಈ ಪಡೆಗಳು ಅವರನ್ನು ಅವರ ಮೂಲ ದೇಶದ ಅಧಿಕಾರಿಗಳಿಗೆ ವರ್ಗಾಯಿಸುವ ಮೂಲಕ ಅವರನ್ನು ಗಡೀಪಾರು ಮಾಡುತ್ತಾರೆಂದು ಮಾಹಿತಿ ನೀಡಿದೆ.
ರಾಷ್ಟ್ರೀಯ ಭದ್ರತೆ ಮತ್ತು ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳಲ್ಲಿ ವಿದೇಶಿ ಪಾತ್ರಗಳ ಕಳವಳಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ.