ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ Miss World ಸ್ಪರ್ಧೆಯ ಬಗ್ಗೆ ಇಂಗ್ಲೆಂಡ್ ಮೂಲದ ಸ್ಪರ್ಧಿಯೊಬ್ಬರು ಸ್ಫೋಟಕ ಆರೋಪ ಮಾಡಿದ್ದು, ಸ್ಪರ್ಧೆಯಲ್ಲಿ ತಮ್ಮನ್ನು ಪ್ರದರ್ಶನ ನೀಡುವ ಕೋತಿಗಳಂತೆ.. ವೇಶ್ಯೆಯರಂತೆ ನೋಡುತ್ತಿದ್ದರು ಎಂದು ಆರೋಪಿಸಿ ಸ್ಪರ್ಧೆಯಿಂದಲೇ ಹಿಂದೆ ಸರಿದಿದ್ದಾರೆ.
ಹೌದು.. ಮಿಸ್ ಇಂಗ್ಲೆಂಡ್ ಖ್ಯಾತಿಯ ಮಿಲ್ಲಾ ಮ್ಯಾಗಿ (milla-magee) ತೆಲಂಗಾಣದಲ್ಲಿ ನಡೆಯುತ್ತಿರುವ ಮಿಸ್ ವರ್ಲ್ಡ್ ಸ್ಪರ್ಧೆಯಿಂದ ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗಿ ಆಯೋಜಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ನಂತರ ಸ್ಪರ್ಧೆಯಿಂದಲೇ ಹಿಂದೆ ಸರಿದಿದ್ದಾರೆ.
ದಿ ಸನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಿಲ್ಲಾ ಮ್ಯಾಗೀ, ನಾನು ಒಳ್ಳೆಯ ಉದ್ದೇಶದಿಂದ ಹೈದರಾಬಾದ್‌ಗೆ ಹೋಗಿದ್ದೆ. ಆದರೆ, ಅಲ್ಲಿ ನನಗೆ ಕೆಟ್ಟ ಅನುಭವವಾಯಿತು. ನನ್ನನ್ನು ವೇಶ್ಯೆಯಂತೆ ನಡೆಸಿಕೊಂಡರು. ಅಲ್ಲದೆ, ಕೆಲವರು ನನ್ನೊಂದಿಗೆ ಅಗೌರವದಿಂದ ವರ್ತಿಸಿದರು. ಸಂಘಟಕರು ನಮ್ಮನ್ನು ಮನರಂಜನೆಗಾಗಿ ಬೀದಿಗಳಲ್ಲಿ ಓಡಾಡುವಂತೆ ಮಾಡಿದರು. ಅದು ತುಂಬಾ ಅನಾನುಕೂಲಕರವಾಗಿತ್ತು ಎಂದು ಆರೋಪಿಸಿದ್ದಾರೆ.
ಪ್ರದರ್ಶನ ಕೋತಿಗಳಂತೆ ನಡೆಸಿಕೊಂಡರು
ಪುರುಷ ಪ್ರಾಯೋಜಕರ ಮುಂದೆ ನನ್ನನ್ನು ಮೆರವಣಿಗೆ ಮಾಡಿಸುವುದು, ಅತಿಯಾದ ಮೇಕಪ್ ಧರಿಸುವಂತೆ ಸೂಚಿಸುವುದು ಮತ್ತು ಬೆಳಗ್ಗೆಯಿಂದ ರಾತ್ರಿಯವರೆಗೆ ಸಂಜೆಯ ನಿಲುವಂಗಿಗಳನ್ನು ಧರಿಸುವಂತೆ ಒತ್ತಾಯಿಸುವುದು ನನಗೆ ತುಂಬಾ ಅನಾನುಕೂಲವನ್ನುಂಟುಮಾಡಿತು. ನಮ್ಮನ್ನು ರಸ್ತೆ ಬದಿಗಳಲ್ಲಿ ಪ್ರದರ್ಶನ ನೀಡುವ ಕೋತಿಗಳಂತೆ ನಡೆಸಿಕೊಂಡರು ಎಂದು ಮಿಲ್ಲಾ ಮ್ಯಾಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಯಾರು ಈ ಮಿಲ್ಲಾ ಮ್ಯಾಗಿ
ಮಿಲ್ಲಾ ಮ್ಯಾಗಿ ಇಂಗ್ಲೆಂಡ್ ಮೂಲದ ರೂಪದರ್ಶಿಯಾಗಿದ್ದು, ಮಿಸ್ ಇಂಗ್ಲೆಂಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ತಿಂಗಳ 7ರಂದು ಹೈದರಾಬಾದ್‌ಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಮ್ಯಾಗಿ, 16 ರಂದು ಮನೆಗೆ ಮರಳಿದರು. ಅವರ ಸ್ಥಾನವನ್ನು ಮಿಸ್ ಇಂಗ್ಲೆಂಡ್ ರನ್ನರ್ ಅಪ್ ಷಾರ್ಲೆಟ್ ಗ್ರಾಂಟ್ (25) ಇಂಗ್ಲೆಂಡ್ ಪ್ರತಿನಿಧಿಸುತ್ತಿದ್ದಾರೆ.
ಸಿಇಒ ಸ್ಪಷ್ಟನೆ
ಇದೇ ವೇಳೆ ಮಿಲ್ಲಾ ಮ್ಯಾಗಿ ಆರೋಪಗಳ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಸಿಇಒ, 'ಮ್ಯಾಗಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬಗ್ಗೆ ಸುಳ್ಳು ಪ್ರಚಾರ ಹರಡಲಾಗುತ್ತಿದೆ ಎಂದು ಹೇಳಿದೆ. ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮಾರ್ಲಿ ಅವರು ಮ್ಯಾಗಿ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಬ್ರಿಟಿಷ್ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಲೇಖನಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದಿದ್ದಾರೆ.
ಮಿಲ್ಲಾ ಮ್ಯಾಗಿ ಅವರು ತಮ್ಮ ತಾಯಿ ಮತ್ತು ಇತರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ತುರ್ತು ಆರೋಗ್ಯ ಪರಿಸ್ಥಿತಿಯಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ವಿನಂತಿಸಿದ್ದಾರೆ ಎಂದು ಜೂಲಿಯಾ ಮಾರ್ಲಿ ಹೇಳಿದರು. ಮ್ಯಾಗಿ ಅವರ ಪರಿಸ್ಥಿತಿ ನಮಗೆ ಅರ್ಥವಾಗಿದೆ. ಅವರ ಕುಟುಂಬದ ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದಕ್ಕಾಗಿಯೇ ಅವರನ್ನು ತಕ್ಷಣವೇ ಇಂಗ್ಲೆಂಡ್‌ಗೆ ಹಿಂದಿರುಗಿಸಲು ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ಮಾರ್ಲಿ ವಿವರಿಸಿದರು.
ತನಿಖೆಗೆ ಕೆಟಿಆರ್ ಒತ್ತಾಯ
ಹೈದರಾಬಾದ್‌ನಲ್ಲಿ ನಡೆಯುತ್ತಿರುವ 2025 ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ವಿಷಕಾರಿ ಮತ್ತು ಸ್ತ್ರೀದ್ವೇಷದ ವಾತಾವರಣವಿದೆ ಎಂದು ಆರೋಪಿಸಿ ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗೀ ಹಿಂದೆ ಸರಿದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಒತ್ತಾಯಿಸಿದ್ದಾರೆ.
"ವಿಶೇಷವಾಗಿ ಮಿಸ್ ವರ್ಲ್ಡ್ ನಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ, ಸ್ತ್ರೀದ್ವೇಷದ ಮನಸ್ಥಿತಿಯನ್ನು ಎದ್ದು ನಿಂತು ಖಂಡಿಸಲು ಸಾಕಷ್ಟು ಧೈರ್ಯ ಬೇಕು. ನೀವು ತುಂಬಾ ಬಲಿಷ್ಠ ಮಹಿಳೆ, ಮಿಲ್ಲಾ ಮ್ಯಾಗೀ, ಮತ್ತು ನಮ್ಮ ತೆಲಂಗಾಣ ರಾಜ್ಯದಲ್ಲಿ ನೀವು ಇದನ್ನು ಎದುರಿಸಬೇಕಾಯಿತು ಎಂದು ನನಗೆ ನಿಜವಾಗಿಯೂ ವಿಷಾದವಿದೆ.
ತೆಲಂಗಾಣವು ಮಹಿಳೆಯರನ್ನು ಗೌರವಿಸುವ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ನಾವು ಅವರನ್ನು ಗೌರವಿಸುತ್ತೇವೆ, ಮತ್ತು ಬೆಳವಣಿಗೆಗೆ ಸಮಾನ ಅವಕಾಶಗಳನ್ನು ಒದಗಿಸುತ್ತೇವೆ. ನಮ್ಮ ನೆಲದ ಕೆಲವು ಶ್ರೇಷ್ಠ ನಾಯಕರು ರಾಣಿ ರುದ್ರಮ್ಮ ಮತ್ತು ಚಿತ್ಯಾಲ ಐಲಮ್ಮ ಅವರಂತಹ ಮಹಿಳೆಯರು. ದುರದೃಷ್ಟವಶಾತ್, ನೀವು ಅನುಭವಿಸಿದ್ದು ನಿಜವಾದ ತೆಲಂಗಾಣವನ್ನು ಪ್ರತಿನಿಧಿಸುವುದಿಲ್ಲ. ನೀವು ಶೀಘ್ರದಲ್ಲೇ ಉತ್ತಮವಾಗುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಕೆಟಿಆರ್ ಪೋಸ್ಟ್ ಮಾಡಿದ್ದಾರೆ.
ತನಿಖೆಗೆ 3 ಸದಸ್ಯರ ಸಮಿತಿ ರಚನೆ
ಇನ್ನು ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗಿ ಆರೋಪಗಳನ್ನು ತೆಲಂಗಾಣ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಳೆದ ಎರಡು ದಿನಗಳಿಂದ ತೆಲಂಗಾಣದ ಪ್ರತಿಷ್ಠೆಗೆ ಧಕ್ಕೆ ತರುವ ಅಭಿಯಾನ ನಡೆಯುತ್ತಿದ್ದು, ಇದರ ಜೊತೆಗೆ, ವಿರೋಧ ಪಕ್ಷಗಳಿಂದ ಟೀಕೆ ಮತ್ತು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮಿಸ್ ವರ್ಲ್ಡ್-2025 ಸ್ಪರ್ಧೆಯ ಆಯೋಜನೆಯ ಕುರಿತು ಮುಖ್ಯಮಂತ್ರಿ ರೇವಂತ್ ರೆಡ್ಡಿ ದೆಹಲಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ದೇಶದ ಪ್ರತಿಷ್ಠೆಗೆ ಸಂಬಂಧಿಸಿದ ವಿಷಯವಾಗಿ ಅವರು ಇದರ ಬಗ್ಗೆ ವಿಚಾರಿಸಿದರು. ಈ ವಿಷಯದ ಬಗ್ಗೆ ಸಮಗ್ರ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸುವಂತೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಮಕೃಷ್ಣ ರಾವ್ ಅವರಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ, ಮಿಸ್ ಇಂಗ್ಲೆಂಡ್ ಮಿಲ್ಲಾ ಮ್ಯಾಗಿ ಅವರು ಮಿಸ್ ವರ್ಲ್ಡ್ ಸ್ಪರ್ಧೆಯ ಆಯೋಜನೆ ಮತ್ತು ನಂತರದ ಬೆಳವಣಿಗೆಗಳ ಕುರಿತು ಮಾಡಿರುವ ಗಂಭೀರ ಆರೋಪಗಳನ್ನು ತನಿಖೆ ಮಾಡಲು ಮತ್ತು ಸಮಗ್ರ ವರದಿಯನ್ನು ಸಲ್ಲಿಸಲು ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಭಾನುವಾರ ಆದೇಶ ಹೊರಡಿಸಲಾಗಿದೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಶಿಖಾ ಗೋಯಲ್, ರಾಮ ರಾಜೇಶ್ವರಿ ಮತ್ತು ಸಾಯಿ ಶ್ರೀ ಈ ಸಮಿತಿಯಲ್ಲಿದ್ದಾರೆ ಎನ್ನಲಾಗಿದೆ.