ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಮುಖಕ್ಕೆ ಕಪ್ಪು ಮಸಿ ಬಳಿಯುವುದಾಗಿ ಶಿವಸೇನೆ (ಯುಬಿಟಿ) ಸ್ಥಳೀಯ ಮುಖಂಡರೊಬ್ಬರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಸಿಕ್ ನ ಉದ್ಧವ್ ಠಾಕ್ರೆ ಪಕ್ಷದ ನಗರ ಘಟಕದ ಉಪಾಧ್ಯಕ್ಷ ಬಾಲಾ ದಾರಾಡೆ ಅವರ ಹೇಳಿಕೆಯು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (MVA)ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಾವರ್ಕರ್ ಅವರ ಜನ್ಮ ದಿನದಂದು ಮರಾಠಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ದಾರಾಡೆ, ಸ್ವಾತಂತ್ರ್ಯ ಹೋರಾಟಗಾರ, ವೀರ ಸಾವರ್ಕರ್ ಹುಟ್ಟಿದ ಸ್ಥಳದಲ್ಲಿ ನಾವು ವಾಸಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ರಾಹುಲ್ ಗಾಂಧಿ ಅವರು ಸಾವರ್ಕರ್ ಅವರನ್ನು ಮಾಫಿ-ವೀರ್ ಎಂದು ಕರೆದಿರುವುದು ಅವಮಾನಕರವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ನಾಸಿಕ್‌ಗೆ ಬಂದರೆ ರಾಹುಲ್ ಗಾಂಧಿ ಅವರ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇವೆ. ಅದು ಸಾಧ್ಯವಾಗದಿದ್ದರೆ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಶಿವಸೇನಾ(UBT) MVA ಯಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿದೆ. ಅಲ್ಲದೇ, ವಿರೋಧ ಪಕ್ಷದ ಎದುರಾಗುವ ಯಾವುದೇ ಬೆದರಿಕೆ ಹೆದರಿಸಲು ಸಿದ್ದನಿದ್ದೇನೆ. ಸಾವರ್ಕರ್ ವಿರುದ್ಧ ಯಾರಾದರೂ ನಿಂದನೀಯ ಪದಗಳನ್ನು ಬಳಸುವುದನ್ನು ನಾವು ಸಹಿಸುವುದಿಲ್ಲ. ಮಹಾ ವಿಕಾಸ್ ಅಘಾಡಿಯ ಭವಿಷ್ಯ ಏನಾಗಲಿ, ಸಾವರ್ಕರ್ ಅವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ದಾರಾಡೆ ಅವರ ಅಭಿಪ್ರಾಯಗಳು ಅವರದೇ ಹೊರತು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಅಧಿಕೃತ ನಿಲುವಲ್ಲ ಎಂದು ಶಿವಸೇನಾ (UBT) ವಕ್ತಾರ ಸುಷ್ಮಾ ಅಂಧಾರೆ ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರು ದಾರಾಡೆ ಅವರ ಬೆದರಿಕೆಯನ್ನು "ಹೇಡಿತನ" ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ ಲೋಕಸಭೆಯಲ್ಲಿ ಸಾರ್ವಕರ್ ವಿರುದ್ಧ ಮಾಡಿರುವ ಟೀಕೆಗಳು ತಮ್ಮ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ ನಾಸಿಕ್ ನಿವಾಸಿ ದೇವೇಂದ್ರ ಭೂತಾಡ ಅವರು, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.