ಸಹರಾನ್‌ಪುರದ: ಅತ್ಯಾಚಾರ ಪ್ರಕರಣಕ್ಕೆ ಅನಿರೀಕ್ಷಿತ ಸ್ಫೋಟಕ ತಿರುವು ಎಂಬಂತೆ, ಉತ್ತರ ಪ್ರದೇಶದ ಸಹರಾನ್‌ಪುರದ 18 ವರ್ಷದ ಯುವತಿಯೊಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಈಗ ತನ್ನ ಬಾಯ್ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಆ ಯುವತಿ 2022 ರಲ್ಲಿ ಇನ್ನೂ ಅಪ್ರಾಪ್ತ ವಯಸ್ಕಳಾಗಿದ್ದಾಗ ನಾಪತ್ತೆಯಾಗಿದ್ದಳು. ನಂತರ ಆಕೆಯ ಪೋಷಕರು ತಮ್ಮ ನೆರೆಯ ಶಕೀಬ್ ಎಂಬಾತ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ನಂತರ, ಶಕೀಬ್ ಅವರನ್ನು ಬಂಧಿಸಲಾಯಿತು ಮತ್ತು ಬಾಲಕಿಯನ್ನು ಪೊಲೀಸರು ರಕ್ಷಿಸಿದರು.
ಇತ್ತೀಚೆಗೆ, ನ್ಯಾಯಾಲಯವು ಶಕೀಬ್‌ಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿಯಲ್ಲಿ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು.
ಆದಾಗ್ಯೂ, ಶಿಕ್ಷೆಗೊಳಗಾದ ನಂತರ, ಮಹಿಳೆ ಶಕೀಬ್‌ನ ನಿವಾಸಕ್ಕೆ ಆಗಮಿಸಿ ಅಲ್ಲಿಯೇ ಉಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ ಎಂದು ವರದಿಯಾಗಿದೆ.
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ನನ್ನ ತಂದೆ ನನ್ನನ್ನು ಒತ್ತಾಯಿಸಿದ್ದಾರೆ ಎಂದು ಯುವತಿ ಮಾಧ್ಯಮ ಮತ್ತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಶಕೀಬ್‌ನನ್ನು ಮದುವೆಯಾಗಲು ಬಯಸುವುದಾಗಿ ಮತ್ತು ಅಲ್ಲಿಯವರೆಗೆ ಅವನ ಮನೆಯಲ್ಲಿಯೇ ವಾಸಿಸಲು ಉದ್ದೇಶಿಸಿರುವುದಾಗಿ ಯುವತಿ ಹೇಳಿದ್ದಾರೆ.
ಆಕೆಯ ಸಹೋದರ ಮತ್ತು ಮಾವ, ಆರೋಪಿ ಶಕೀಬ್ ಮನೆಗೆ ತೆರಳಲು ಆಕೆಯೊಂದಿಗೆ ಬಂದಿದ್ದರು. ಆದರೆ ಬುಧವಾರ ಯುವತಿ ವಿರುದ್ಧ ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು. ಅಶಾಂತಿಯ ನಂತರ, ಅಧಿಕಾರಿಗಳು ಆಕೆಯ ಸುರಕ್ಷತೆಗಾಗಿ ಸರ್ಕಾರಿ ಆಶ್ರಯ ತಾಣಕ್ಕೆ ಸ್ಥಳಾಂತರಿಸಿದರು.
ಈಗ ವಯಸ್ಕಳಾಗಿರುವ ಯುವತಿ ಕಾನೂನುಬದ್ಧವಾಗಿ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರಳಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಶಕೀಬ್ ಕುಟುಂಬದ ಮೇಲೆ ಹೆಚ್ಚುತ್ತಿರುವ ಸಾಮಾಜಿಕ ಒತ್ತಡದಿಂದಾಗಿ ಶಕೀಬ್ ನಿವಾಸದಲ್ಲಿ ಆಕೆಯ ವಾಸ್ತವ್ಯ ಮುಂದುವರಿಯುವುದು ಅಸಾಧ್ಯವಾಗಿದೆ.
ಶಕೀಬ್ ತಂದೆ, ತಮ್ಮ ಮಗನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿಕೊಂಡಿದ್ದು, ಅಂತಿಮವಾಗಿ ಸತ್ಯ ಹೊರಬಂದಿದೆ ಎಂದು ಹೇಳಿದ್ದಾರೆ.