ಪಾಟ್ನಾ: ಬಿಹಾರದಲ್ಲಿ ಮೊದಲ ಹಂತದ ಮತದಾನದ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧೆಡೆ ರ‍್ಯಾಲಿಗಳಲ್ಲಿ ಪಾಲ್ಗೊಂಡ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ ಡಿಎ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ನಕಲಿ ಪದವಿ ಪ್ರಮಾಣ ಪತ್ರ ಹೊಂದಿದ್ದು, ಅವರಿಗೆ ಶಿಕ್ಷಣದ ಕುರಿತು ಹೆಚ್ಚಿನ ಒಲವು ಇಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಗಂಭೀರವಾದ ಆರೋಪ ಮಾಡಿದ್ದಾರೆ.
ಮೊದಲ ಹಂತ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಇಂದು ರ‍್ಯಾಲಿಯೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಎನ್ ಡಿಎ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಾಚೀನ ಕಾಲದಲ್ಲಿ ನಳಂದವು ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. ಚೀನಾ, ಜಪಾನ್ ಮತ್ತು ಕೊರಿಯಾದ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಗೆ ಇಂತಹ ವಿಷಯಗಳ ಬಗ್ಗೆ ಯಾವುದೇ ಆಸ್ತಿ ಇಲ್ಲ. ಅವರು ನಕಲಿ ಪದವಿ ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಒಂದು ವೇಳೆ ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ನಳಂದದಲ್ಲಿ ಉನ್ನತ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.