ಗುವಾಹಟಿ: ಮುಸ್ಲಿಮರು ಹೆಚ್ಚಾಗುವುದರೊಂದಿಗೆ ಜನಸಂಖ್ಯಾ ಬದಲಾವಣೆಯ ಜೊತೆಗೆ ರಾಜ್ಯವು 'ಆರ್ಥಿಕ ಬದಲಾವಣೆ'ಗೂ ಸಾಕ್ಷಿಯಾಗುತ್ತಿದೆ. ಇದನ್ನು 'ಅಸ್ಸಾಂ ಜನರ ಶರಣಾಗತಿ' ಪ್ರಾರಂಭವಾಗಿದೆ ಎಂದು ಅರ್ಥೈಸಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, ರಾಜ್ಯದಲ್ಲಿ ಹಿಂದೂ ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗುತ್ತಿದ್ದು, ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
"2001 ಮತ್ತು 2011 ರ ನಡುವಿನ ಅವಧಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಅಸ್ಸಾಂನ ಪ್ರತಿಯೊಂದು ಬ್ಲಾಕ್‌ನಲ್ಲಿ, ಹಿಂದೂ ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗುತ್ತಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ. ವೇಗವಾಗಿ ಜನಸಂಖ್ಯೆ ಬದಲಾವಣೆಯಾಗುತ್ತಿದೆ. ಒಂದು ರೀತಿಯಲ್ಲಿ ಅಸ್ಸಾಂ ಜನರ ಶರಣಾಗತಿಯ ಒಂದು ಅಧ್ಯಾಯ ಪ್ರಾರಂಭವಾಗಿದೆ ಎಂದು ಶರ್ಮಾ ಹೇಳಿದರು.
ಕಳೆದ ವರ್ಷ ಹೊರಡಿಸಲಾದ ಹೊಸ ನಿರ್ದೇಶನದ ಪ್ರಕಾರ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಭೂ ಮಾರಾಟಕ್ಕೆ ಸರ್ಕಾರವು ಅನುಮತಿಗಳನ್ನು ಪರಿಶೀಲಿಸುತ್ತಿದೆ. ಹಿಂದೂಗಳಿಂದ ಮುಸ್ಲಿಮರಿಗೆ ಭೂ ಮಾರಾಟವು ತುಂಬಾ ಹೆಚ್ಚಾಗಿರುವುದನ್ನ ನೋಡಿದ್ದೇವೆ. ಆದರೆ ಅದಕ್ಕೆ ಪ್ರತಿಯಾಗಿ ಮುಸ್ಲಿಮರಿಂದ ಹಿಂದೂಗಳಿಗೆ ಭೂ ಮಾರಾಟಕಡಿಮೆ ಇದೆ. ಆದಾಗ್ಯೂ, ಈ ಅನುಮತಿಗಳು ಬಹಳಷ್ಟು ಅಸ್ಸಾಮೀಸ್ ಮತ್ತು ಸ್ಥಳೀಯ ಮುಸ್ಲಿಮರನ್ನು ಒಳಗೊಂಡಿವೆ ಮತ್ತು ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರಕ್ಕೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದರು.
"ಜನಸಂಖ್ಯಾ ಬದಲಾವಣೆಯ ಹೊರತಾಗಿ, ಸಂಪತ್ತು ಸೃಷ್ಟಿಯಲ್ಲಿಯೂ ಬದಲಾವಣೆ ಕಂಡುಬಂದಿದೆ. ಇಲ್ಲಿಯವರೆಗೆ ಸಂಖ್ಯೆಗಳು ಮಾತ್ರ ಹೆಚ್ಚಾಗಿದೆ ಎಂದು ನಾವು ಭಾವಿಸುತ್ತಿದ್ದೆವು, ಆದರೆ ಈಗ ಸಂಪತ್ತಿನ ಮಾದರಿಯೂ ಬದಲಾಗಿದೆ ಎಂದು ನೋಡುತ್ತಿದ್ದೇವೆ. ಜನಸಂಖ್ಯಾ ಬದಲಾವಣೆಯನ್ನು ನೀವು ಕೆಲವೊಮ್ಮೆ ಒಪ್ಪಿಕೊಳ್ಳಬಹುದು,ಆದರೆ ಆರ್ಥಿಕ ಬದಲಾವಣೆಯನ್ನು ನೋಡುವುದು ಸಂಪೂರ್ಣ ವಿನಾಶವನ್ನು ಸೂಚಿಸುತ್ತದೆ. ಮೊದಲು, ನಮಗೆ ಇದರ ಬಗ್ಗೆ ತಿಳಿದಿರಲಿಲ್ಲ. ಆದರೆ ಈಗ, ಸರ್ಕಾರದ ಅನುಮತಿ ಅಗತ್ಯವಿರುವುದರಿಂದ (ಭೂಮಿ ಮಾರಾಟಕ್ಕೆ) ನಾವು ಡೇಟಾವನ್ನು ಪಡೆಯುತ್ತಿದ್ದೇವೆ" ಎಂದು ಸಿಎಂ ಹೇಳಿದರು.
ಕಳೆದ ವರ್ಷ, ಅಸ್ಸಾಂ ಸರ್ಕಾರವು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಭೂಮಿ ಮಾರಾಟದ ಬಗ್ಗೆ ನಿರ್ಧಾರ ತೆಗೆದುಕೊಂಡಿತ್ತು. ಮುಂದುವರಿಯುವ ಮೊದಲು ಮುಖ್ಯಮಂತ್ರಿ ಕಚೇರಿಯ ಒಪ್ಪಿಗೆಯನ್ನು ಕಡ್ಡಾಯಗೊಳಿಸಿತು.