ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಚುನಾವಣೋತ್ತರ ಸಮೀಕ್ಷೆಯ ಭವಿಷ್ಯವಾಣಿಗಳನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ತಳ್ಳಿಹಾಕಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಇಂಡಿಯಾ ಬಣವು ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೋತ್ತರ ಸಮೀಕ್ಷೆಗಳು ಏನೇನೂ ಅಲ್ಲ. ಈ ರೀತಿಯ ಊಹೆಗಳನ್ನು ಬಿಜೆಪಿಯ ಉನ್ನತ ನಾಯಕತ್ವದ ನಿರ್ದೇಶನದ ಮೇರೆಗೆ ಮಾಡಲಾಗಿದೆ ಎಂದು ಆರ್‌ಜೆಡಿ ನಾಯಕ ಆರೋಪಿಸಿದ್ದಾರೆ.
ಮಂಗಳವಾರ ವಿವಿಧ ಸಂಸ್ಥೆಗಳು ನಡೆಸಿದ ಎಕ್ಸಿಟ್ ಪೋಲ್ ಸಮೀಕ್ಷೆಗಳು ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ವಿರೋಧ ಪಕ್ಷಗಳ 'ಮಹಾಘಟಬಂಧನ್'ಗೆ ಕಡಿಮೆ ಸ್ಥಾನಗಳು ಮತ್ತು ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷಕ್ಕೆ ನಿರಾಶಾದಾಯಕ ಪ್ರದರ್ಶನವಾಗಿರಲಿದೆ ಎಂದು ಭವಿಷ್ಯ ನುಡಿದಿವೆ.
'ಇಂಡಿಯಾ ಬಣವು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಮತದಾನದಲ್ಲಿ ತೊಡಗಿಕೊಂಡಿರುವುದು ಸರ್ಕಾರದಲ್ಲಿ ಬದಲಾವಣೆಯನ್ನು ಬಯಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಅವರು 'ಮಹಾಘಟಬಂಧನ್' ಪರವಾಗಿ ಮತ ಚಲಾಯಿಸಿದ್ದಾರೆ. ನಾವು ನವೆಂಬರ್ 18 ರಂದು ಪ್ರಮಾಣವಚನ ಸ್ವೀಕರಿಸುತ್ತೇವೆ' ಎಂದು ಆರ್‌ಜೆಡಿ ನಾಯಕ ಹೇಳಿದ್ದಾರೆ.
ಬಿಹಾರದಲ್ಲಿ ಆಡಳಿತಾರೂಢ ಸರ್ಕಾರವನ್ನು ಬದಲಾಯಿಸಲು ಸುಮಾರು 72 ಲಕ್ಷ ಹೆಚ್ಚುವರಿ ಮತದಾರರು ಮತ ಚಲಾಯಿಸಿದ್ದಾರೆ. ಬಿಜೆಪಿ ನಾಯಕರು ಖಂಡಿತವಾಗಿಯೂ ಎಣಿಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಾರೆ. ನಾವು ಯಾವುದೇ ಕಾರಣಕ್ಕೂ ಇದು ಸಂಭವಿಸಲು ಬಿಡುವುದಿಲ್ಲ. ನಾವು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಅವರು ಪುನರುಚ್ಚರಿಸಿದರು.
ಮಂಗಳವಾರ ಬಿಹಾರದಲ್ಲಿ ನಡೆದ ಎರಡನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಶೇ 69 ರಷ್ಟು ಮತದಾನವಾಗಿದೆ.
ನವೆಂಬರ್ 6 ರಂದು 121 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ, 3.75 ಕೋಟಿ ಮತದಾರರ ಪೈಕಿ ದಾಖಲೆಯ ಶೇ 65.09 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.