ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಈ ನಡುವೆ ಘಟನೆ ವೇಳೆ ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್ ಉನ್ ನಬಿ ಎನ್ನುವುದು ವಿಧಿವಿಜ್ಞಾನ ಪರೀಕ್ಷಾ ವರದಿಯಿಂದ ಬಹಿರಂಗಗೊಂಡಿದೆ.
ಡಾ. ಉಮರ್ ಅವರ ತಾಯಿಯ ಡಿಎನ್ಎ ಮಾದರಿಗಳು, ಸ್ಫೋಟದ ಸ್ಥಳದಿಂದ ವಶಪಡಿಸಿಕೊಂಡ ಮೂಳೆಗಳು ಮತ್ತು ಹಲ್ಲುಗಳಿಂದ ಹೊರತೆಗೆಯಲಾದ ಡಿಎನ್ಎ ಮಾದರಿಗಳೊಂದಿಗೆ ಹೊಲಿಕೆಯಾದ ಬಳಿಕ ಈ ವಿಷಯ ದೃಢಪಟ್ಟಿದೆ.
ಈ ಮಾದರಿಗಳನ್ನು ಏಮ್ಸ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಿಶ್ಲೇಷಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಾರನ್ನು ಚಲಾಯಿಸಿದ ವ್ಯಕ್ತಿ ಉಮರ್ ಎಂದು ತನಿಖಾಧಿಕಾರಿಗಳು ಈ ಮೊದಲೇ ಶಂಕಿಸಿದ್ದರು. ಹೀಗಿದ್ದರೂ ಮುಂದೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯವಿತ್ತು. ಉಮರ್ ಕುಟುಂಬಸ್ಥರ ಡಿಎನ್‌ಎ ಸಂಗ್ರಹಿಸಲಾಗಿತ್ತು.
ದೆಹಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಉಮರ್ ನಬಿ ಶ್ರೀನಗರದಿಂದ ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪಡೆದು 2023ರಲ್ಲಿ ಕಾಶ್ಮೀರದ ಅನಂತ್‌ನಾಗ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್‌ಆರ್ ಆಗಿ ಕೆಲಸ ಮಾಡುತ್ತಿದ್ದ.
ಪುಲ್ವಾಮಾದ ಕೊಯಿಲ್ ಗ್ರಾಮದ ಅವರ ಸಂಬಂಧಿಕರ ಪ್ರಕಾರ, ಡಾ. ಉಮರ್ ಶಾಂತ ಸ್ವಭವಾದ ವ್ಯಕ್ತಿ ಎನ್ನಲಾಗಿದ್ದು, ಅವನಿಗೆ ಓದೇ ಪ್ರಪಂಚವಾಗಿತ್ತು ಎಂದಿದ್ದಾರೆ. ಪೊಲೀಸ್ ಮೂಲಗಳು ಹೇಳುವ ಪ್ರಕಾರ, ಉಮರ್ ನ ಇತ್ತೀಚಿನ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿತ್ತು.
ಅವನು ಫರಿದಾಬಾದ್ ಮತ್ತು ದೆಹಲಿ ನಡುವಿ ಪ್ರಯಾಣವನ್ನು ಹೆಚ್ಚು ಮಾಡಿದ್ದನಂತೆ. ರಾಮಲೀಲಾ ಮೈದಾನ ಮತ್ತು ಸುನೇಹ್ರಿ ಮಸೀದಿಗಳಿಗೆ ಭೇಟಿ ನೀಡುತ್ತಿದ್ದ.
ಉಮರ್ ಕೆಲಸ ವಿಷಯದಲ್ಲಿ ಕೆಟ್ಟ ಉದ್ಯೋಗಿಯಾಗಿಯೇ ಕಾಣಿಸಿಕೊಂಡಿದ್ದು, ದಿನೇ ದಿನೇ ಒಂದಿಲ್ಲೊಂದು ದೂರುಗಳು ಬರುತ್ತಲೇ ಇದ್ದವು. ಸಹ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ರೋಗಿಗಳು ಕೂಡ ಉಮರ್‌ನ ಅಸಭ್ಯ ಹಾಗೂ ಅಜಾಗರೂಕತೆ ಬಗ್ಗೆ ಆರೋಪಿಸುತ್ತಿದ್ದರು. ಅಲ್ಲದೇ ಉಮರ್ ಕೂಡ ಹೆಚ್ಚಿನ ಸಮಯ ಆಸ್ಪತ್ರೆಗೆ ಗೈರಾಗಿಯೇ ಇರುತ್ತಿದ್ದ ಎನ್ನಲಾಗಿದೆ.
ಇನ್ನು ಸ್ಫೋಟದ ದಿನದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವನು ಕೆಂಪು ಕೋಟೆಯ ಕಡೆಗೆ ಕಾರು ಚಲಾಯಿಸುವ ಮುನ್ನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಸೀದಿಯ ಬಳಿ ವಾಹನವನ್ನು 3 ಗಂಟೆಗಳ ಕಾಲ ನಿಲ್ಲಿಸಿರುವುದು ಕಂಡುಬಂದಿದೆ.
ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದು, 29 ಜನ ಗಾಯಗೊಂಡಿದ್ದಾರೆ.
ಸ್ಫೋಟದ ವೇಳೆ ಹತ್ತಿರವೇ ಇದ್ದ ಅನೇಕ ವಾಹನಗಳು ಸುಟ್ಟುಹೋಗಿದ್ದು, ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರಿನಲ್ಲಿ ಸಂಭವಿಸಿದ ಈ ಘಟನೆ ದೆಹಲಿ ಪೊಲೀಸರು, ಎನ್‌ಐಎ, ಎನ್‌ಎಸ್‌ಜಿ ಮತ್ತು ವಿಧಿವಿಜ್ಞಾನ ತಂಡಗಳಿಂದ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿದೆ.
ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಭದ್ರತಾ ತಪಾಸಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಪ್ರಕರಣದ ಆರೋಪಿಗಳಾದ ಡಾ. ಮುಜಮ್ಮಿಲ್, ಡಾ. ಅದೀಲ್, ಶಾಹೀನ್ ಜಂಟಿಯಾಗಿ ಸುಮಾರು 20 ಲಕ್ಷ ರೂ. ನಗದು ಸಂಗ್ರಹಿಸಿದ್ದು, ಅದನ್ನು ಉಮರ್‌ಗೆ ಹಸ್ತಾಂತರಿಸಿದ್ದರು ಎಂದು ತಿಳಿದುಬಂದಿದೆ.
ಈ ಹಣದಿಂದ ಆರೋಪಿಗಳು ಗುರುಗ್ರಾಮ್, ನುಹ್ ಮತ್ತು ಹತ್ತಿರದ ಪ್ರದೇಶಗಳಿಂದ ಐಇಡಿ ತಯಾರಿಕೆಗಾಗಿ ಉದ್ದೇಶಿಸಲಾದ 3 ಲಕ್ಷ ರೂ. ಮೌಲ್ಯದ 20 ಕ್ವಿಂಟಾಲ್‌ಗೂ ಹೆಚ್ಚು ಎನ್‌ಪಿಕೆ ರಸಗೊಬ್ಬರವನ್ನು ಖರೀದಿಸಿದ್ದಾರೆ. ಈ ನಡುವೆ ಉಮರ್ ಮತ್ತು ಡಾ. ಮುಜಮ್ಮಿಲ್ ನಡುವೆ ಹಣಕಾಸು ಕುರಿತು ಮನಸ್ತಾಪವೂ ಇತ್ತು ಎನ್ನಲಾಗಿದೆ. ಬಳಿಕ ಸಿಗ್ನಲ್ ಅಪ್ಲಿಕೇಶನ್‌ನಲ್ಲಿ ಉಮರ್ 2-4 ಸದಸ್ಯರೊಂದಿಗೆ ಗುಂಪನ್ನು ರಚಿಸಿದ್ದ ಎಂದು ತನಿಖಾ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ.