ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿಕ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ಕಂಡು ಬಂದಿದೆ. ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉಗ್ರರ ಡೈರಿಯನ್ನು ಪತ್ತೆ ಮಾಡಿದ್ದು, ಡೈರಿಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.
ಉಗ್ರ ಮುಜಾಮಿಲ್ ಹಾಗೂ ಆತ್ಮಾಹುತಿ ಉಗ್ರ ಉಮರ್'ಗೆ ಸೇರಿದ್ದ ಡೈರಿ ಇದಾಗಿದ್ದು, ಡೈರಿಯಲ್ಲಿ ಉಗ್ರರ ಷಡ್ಯಂತ್ರ ಹಾಗೂ ಹಲವು ಕೋಡ್ ವರ್ಡ್ ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಡೈರಿಯಲ್ಲಿ ಹಲವು ಬಾರಿ ಆಪರೇಷನ್ ಪದವನ್ನು ಉಗ್ರರು ಬಳಕೆ ಮಾಡಿದ್ದು, ಉಕಾಸ (ಅರೇಬಿಕ್ ಭಾಷೆಯಲ್ಲಿ ಉಕಾಸ ಎಂದರೆ ಜೇಡ ಎಂದು ಅರ್ಥ) ಎಂಬ ಹ್ಯಾಂಡ್ಲರ್ ಹೆಸರು ಕೂಡ ಡೈರಿಯಲ್ಲಿ ಪತ್ತೆಯಾಗಿದೆ. ಇದಲ್ಲದೆ, 25 ವ್ಯಕ್ತಿಗಳು ಹೆಸರಿದ್ದು, ಇವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರ ಹಾಗೂ ಫರೀದಾಬಾದ್ ಮೂಲದವರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಡೈರಿಗಳನ್ನು ಮಂಗಳವಾರ ಮತ್ತು ಬುಧವಾರ ಡಾ. ಉಮರ್ ಅವರ ಕೊಠಡಿ ಸಂಖ್ಯೆ ನಾಲ್ಕು ಮತ್ತು ಮುಜಮ್ಮಿಲ್ ಅವರ ಕೊಠಡಿ ಸಂಖ್ಯೆ 13 ರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
8 ಮಂದಿ ಉಗ್ರರು ನಾಲ್ಕು ಸ್ಥಳಗಳಲ್ಲಿ ಸರಣಿ ದಾಳಿ ನಡೆಸಲು ಯೋಜನೆ ರೂಪಿಸಿದ್ದು, ಪ್ರತೀ ಸ್ಥಳಕ್ಕೆ ತಲಾ ಇಬ್ಬರು ಉಗ್ರರನ್ನು ರವಾನಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.