ಶ್ರೀನಗರ: ದೆಹಲಿ ಕಾರು ಸ್ಫೋಟದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮತ್ತು ಪ್ರಾಥಮಿಕ ತನಿಖೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲಗಳ ಕಡೆಗೆ ಬೆರಳು ತೋರಿಸುತ್ತಿರುವಾಗ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, "ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಿವಾಸಿಯೂ ಭಯೋತ್ಪಾದಕ ಅಥವಾ ಉಗ್ರರೊಂದಿಗೆ ಸಂಬಂಧ ಹೊಂದಿಲ್ಲ" ಎಂದು ಪ್ರತಿಪಾದಿಸಿದ್ದಾರೆ.
"ದೆಹಲಿಯಲ್ಲಿ ಉಗ್ರರ ಕೃತ್ಯವನ್ನು ಎಷ್ಟು ಖಂಡಿಸಿದರೂ ಸಾಕಾಗುವುದಿಲ್ಲ. ಈ ರೀತಿ ಅಮಾಯಕ ಜನರನ್ನು ಕೊಲ್ಲುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಯಾವುದೇ ಧರ್ಮವು ಅಂತಹ ಕೃತ್ಯಗಳನ್ನು ಅನುಮತಿಸುವುದಿಲ್ಲ. ತನಿಖೆ ನಡೆಯುತ್ತಿದೆ ಮತ್ತು ಎಲ್ಲಾ ಅಪರಾಧಿಗಳಿಗೆ ಶಿಕ್ಷೆಯಾಗಬೇಕು" ಎಂದು ಒಮರ್ ಅಬ್ದುಲ್ಲಾ ಅವರು ಜಮ್ಮುವಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ ಪ್ರತಿಯೊಬ್ಬ ನಿವಾಸಿಯೂ ಭಯೋತ್ಪಾದಕರಲ್ಲ. ಆದರೆ "ಇಲ್ಲಿ ಯಾವಾಗಲೂ ಶಾಂತಿ ಮತ್ತು ಸಹೋದರತ್ವವನ್ನು ಭಂಗಗೊಳಿಸಲು ಕೆಲವೇ ಕೆಲವು ಜನ ಪ್ರಯತ್ನಿಸುತ್ತಿದ್ದಾರೆ" ಎಂದು ಜಮ್ಮು ಮತ್ತು ಕಾಶ್ಮೀರ ಸಿಎಂ ಹೇಳಿದರು.
"ನಾವು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಿವಾಸಿ ಮತ್ತು ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನು ಒಂದೇ ಸಿದ್ಧಾಂತದಿಂದ ನೋಡಲು ಪ್ರಾರಂಭಿಸಿದಾಗ ಮತ್ತು ಅವರಲ್ಲಿ ಪ್ರತಿಯೊಬ್ಬರೂ ಭಯೋತ್ಪಾದಕ ಎಂದು ಭಾವಿಸಿದಾಗ, ಜನರನ್ನು ಸರಿಯಾದ ಹಾದಿಯಲ್ಲಿ ಇಡುವುದು ಕಷ್ಟ" ಎಂದು ಸಿಎಂ ಹೇಳಿದರು.
ಸ್ಫೋಟಕ್ಕೆ ಕಾರಣರಾದವರನ್ನು ಗುರುತಿಸುವುದು ಮತ್ತು ಶಿಕ್ಷಿಸುವುದು ಅಗತ್ಯವಾಗಿದ್ದರೂ ಮುಗ್ಧ ಜನರನ್ನು ಅನುಮಾನಿಸಬಾರದು ಮತ್ತು ನಿಂದಿಸಬಾರದು ಎಂದು ಒಮರ್ ತಿಳಿಸಿದ್ದಾರೆ.
ಶಂಕಿತರ ವೃತ್ತಿಪರ ಹಿನ್ನೆಲೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಒಮರ್, "ನಾವು ಇದಕ್ಕೂ ಮೊದಲು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ನೋಡಿಲ್ಲವೇ? ವಿದ್ಯಾವಂತರು ಇಂತಹ ವಿಷಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಯಾರು ಹೇಳಿದ್ದಾರೆ?" ಎಂದರು.
ಸೋಮವಾರ ಸಂಜೆ, ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ 13 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟಗೊಂಡ ಐ20 ಕಾರನ್ನು ಪುಲ್ವಾಮಾದ ಡಾ. ಉಮರ್ ನಬಿ ಚಾಲನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.