ಥಾಣೆ: ಮರಾಠಿಯಲ್ಲಿ ಮಾತನಾಡದ ಕಾರಣ ರೈಲಿನಲ್ಲಿ ಜಗಳ ನಡೆದಿದ್ದು, ಗುಂಪೊಂದು ಹಲ್ಲೆ ನಡೆಸಿದ ನಂತರ 19 ವರ್ಷದ ವಿದ್ಯಾರ್ಥಿಯೊರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ವಿದ್ಯಾರ್ಥಿ ಅರ್ನವ್ ಲಕ್ಷ್ಮಣ್ ಖೈರೆ ಎಂದು ಗುರುತಿಸಲಾಗಿದೆ. ಈತ ಮಂಗಳವಾರ ಸಂಜೆ ಕಲ್ಯಾಣ್ ಪೂರ್ವದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಅರ್ನವ್ ಸ್ಥಳೀಯ ರೈಲಿನಲ್ಲಿ ಮುಲುಂಡ್‌ನಲ್ಲಿರುವ ತನ್ನ ಕಾಲೇಜಿಗೆ ತೆರಳುತ್ತಿದ್ದಾಗ ಕಲ್ಯಾಣ್ ಮತ್ತು ಥಾಣೆ ನಿಲ್ದಾಣಗಳ ನಡುವೆ ಹಲ್ಲೆ ನಡೆದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಕಲ್ಯಾಣ್‌ಜಿ ಗೆಟೆ ಹೇಳಿದ್ದಾರೆ.
ಜನರಿಂದ ತುಂಬಿದ ಕಂಪಾರ್ಟ್‌ಮೆಂಟ್‌ನಲ್ಲಿ ಅರ್ನವ್ ಒಬ್ಬ ಪ್ರಯಾಣಿಕನನ್ನು ಸ್ವಲ್ಪ ಮುಂದಕ್ಕೆ ಹೋಗುವಂತೆ ಹೇಳಿದಾಗ ಮರಾಠಿಯಲ್ಲಿ ಮಾತನಾಡದಿದ್ದಕ್ಕಾಗಿ ಗದರಿದ ಪ್ರಯಾಣಿಕ, ಇತರ ಐವರೊಂದಿಗೆ ಸೇರಿಕೊಂಡು ಅರ್ನವ್ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ತದನಂತರ ಥಳಿತದ ಭಯದಿಂದ ಅರ್ನವ್ ಥಾಣೆ ನಿಲ್ದಾಣದಲ್ಲಿ ಇಳಿದು ಮುಂದಿನ ರೈಲನ್ನು ಹತ್ತಿ ಮುಲುಂಡ್‌ಗೆ ಹೋಗಿದ್ದಾನೆ. ಎಲ್ಲಾ ಕ್ಲಾಸ್ ಗಳಿಗೂ ಬಂಕ್ ಹಾಕಿದ ಅರ್ನವ್ ಬೇಗನೆ ಮನೆಗೆ ಬಂದಿದ್ದು, ನಡೆದ ವಿಷಯವನ್ನು ತನ್ನ ತಂದೆಗೆ ಫೋನ್ ನಲ್ಲಿ ತಿಳಿಸಿದ್ದ ಎಂದು ಅವರು ಹೇಳಿದರು.
ಆ ಸಂಜೆ ಕೆಲಸ ಮುಗಿಸಿಕೊಂಡು ತಂದೆ ಮನೆಗೆ ಹಿಂತಿರುಗಿದಾಗ, ಬಾಗಿಲು ಮುಚ್ಚಿರುವುದು ಕಂಡುಬಂದಿದೆ. ನಂತರ ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಆತನ ಮಗ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ಸಂಬಂಧ ತಂದೆ ದೂರು ದಾಖಲಿಸಿದ್ದು, ಹಲ್ಲೆಯಿಂದ ಉಂಟಾದ ಮಾನಸಿಕ ಒತ್ತಡದಿಂದಾಗಿ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.