ಗರ್ವಾ: ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ತನ್ನ ಬಾಯ್ ಫ್ರೆಂಡ್ ಜತೆ ಸಿಕ್ಕಿಬಿದ್ದ ಹದಿಹರೆಯದ ಹುಡುಗಿಗೆ ಆಕೆಯ ಕುಟುಂಬಸ್ಥರು ಥಳಿಸಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಸಂಜೆ ಕುಟುಂಬವು 15 ವರ್ಷದ ಬಾಲಕಿಯ ಶವವನ್ನು ರಹಸ್ಯವಾಗಿ ಅಂತ್ಯಕ್ರಿಯೆ ನಡೆಸುತ್ತಿದ್ದಾಗ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
"ಬಾಲಕಿಯನ್ನು ಆಕೆಯ ಗೆಳೆಯನೊಂದಿಗೆ ಇರುವುದನ್ನು ನೋಡಿದ ಕುಟುಂಬ, ಆಕೆಯನ್ನು ಹಿಡಿದು ಥಳಿಸಿ ಕೊಂದಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ಕುಟುಂಬ ಸದಸ್ಯರು ಆಕೆಯ ಶವವನ್ನು ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸ್ ತಂಡ ಗರ್ವಾ ಪಟ್ಟಣ ಪೊಲೀಸ್ ಠಾಣೆ ಪ್ರದೇಶದ ಸ್ಮಶಾನಕ್ಕೆ ತೆರಳಿತು" ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ಅವರು ತಿಳಿಸಿದ್ದಾರೆ.
"ಪೊಲೀಸರನ್ನು ನೋಡಿದ ತಕ್ಷಣ ಹೆಚ್ಚಿನ ಕುಟುಂಬ ಸದಸ್ಯರು ಸ್ಥಳದಿಂದ ಓಡಿಹೋದರು. ಆದರೆ ಬಾಲಕಿಯ ತಂದೆ ಮತ್ತು ಸಹೋದರನನ್ನು ಬಂಧಿಸಲಾಯಿತು" ಎಂದು ಅವರು ಹೇಳಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದು ಮರ್ಯಾದಾ ಹತ್ಯೆ ಪ್ರಕರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಂದೆ ಮತ್ತು ಸಹೋದರನ ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.