ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 11 ವರ್ಷದ ಶಾಲಾ ಬಾಲಕನೊಬ್ಬ ತನ್ನ ಸ್ನೇಹಿತನ ಸಹಾಯದಿಂದ ಕಲ್ಲುಗಳನ್ನು ಎಸೆದು ಮತ್ತು ಕಿರುಚಿಕೊಳ್ಳುವ ಮೂಲಕ ದಾಳಿ ನಡೆಸಲು ಬಂದಿದ್ದ ಚಿರತೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಮಾಯಾಂಕ್ ಕುವಾರನ ಮೇಲೆ ಚಿರತೆ ಎರಗಿದಾಗ ಆತನೊಂದಿಗೆ ಇದ್ದ ಶಾಲಾ ಬ್ಯಾಗ್ ಬಾಲಕನ ಜೀವ ಉಳಿಸಿದೆ. ಬ್ಯಾಗ್ ಇಲ್ಲದಿದ್ದರೆ ಪರಿಣಾಮ ಕೆಟ್ಟದಾಗಿರುತ್ತಿತ್ತು.
'5ನೇ ತರಗತಿಯ ಕುವಾರ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಚಿರತೆಯೊಂದು ದಾಳಿ ಮಾಡಿದೆ. ಆಗ ಆತ ಮತ್ತು ಆತನ ಇನ್ನೊಬ್ಬ ಸ್ನೇಹಿತ ಧೈರ್ಯದಿಂದ ಕೂಗುತ್ತಾ, ಚಿರತೆ ಮೇಲೆ ಕಲ್ಲುಗಳನ್ನು ಎಸೆದು ಪ್ರತಿದಾಳಿ ನಡೆಸಿದ್ದಾರೆ' ಎಂದು ಅಧಿಕಾರಿಗಳು ದೃಢಪಡಿಸಿದರು.
ಮಕ್ಕಳ ಗದ್ದಲದಿಂದ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದಾಗಿ ಚಿರತೆ ಮತ್ತೆ ಕಾಡಿಗೆ ಓಡಿಹೋಗಿದೆ. ಕುವಾರ ಕೈಗೆ ಪರಚಿದ ಗಾಯವಾಗಿದ್ದು, ಸದ್ಯ ವಿಕ್ರಮ್‌ಗಢ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕನ ಕೈಗೆ ಹೊಲಿಗೆ ಹಾಕಲಾಗಿದೆ ಎಂದು ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಚಡ್ ರೆಸಿಡೆಂಟ್ ಅರಣ್ಯಾಧಿಕಾರಿ ಸ್ವಪ್ನಿಲ್ ಮೋಹಿತೆ ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿ, ಅರಣ್ಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ ನಂತರ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು. ಅರಣ್ಯ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲವಾರು ಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು.
ಚಿರತೆ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳನ್ನು ಸಂಜೆ 4 ಗಂಟೆಯೊಳಗೆ ಮುಚ್ಚುವಂತೆ ಅರಣ್ಯ ಇಲಾಖೆ ವಿನಂತಿಸಿದೆ.
ಚಿರತೆಯ ಚಲನವಲನಗಳನ್ನು ಪತ್ತೆಹಚ್ಚಲು AI-ಸಕ್ರಿಯಗೊಳಿಸಿದ ಕ್ಯಾಮೆರಾವನ್ನು ಅಳವಡಿಸಲಾಗುತ್ತಿದೆ ಮತ್ತು ಸಾಂಪ್ರದಾಯಿಕ 'ದವಂಡಿ' (ಸಾರ್ವಜನಿಕ ಪ್ರಕಟಣೆಗಳು) ಮೂಲಕ ಹಳ್ಳಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಮೋಹಿತೆ ಹೇಳಿದರು.